Headlines

ಭಾರತಕ್ಕೆ ಬೈದು ರಷ್ಯಾ ಜೊತೆ ಭಾರಿ ವಹಿವಾಟು ಹೆಚ್ಚಿಸಿಕೊಂಡ ಅಮೆರಿಕಾ!

ಅಲಾಸ್ಕಾ, ಆಗಸ್ಟ್ 17: ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಜತೆ ಯಾವ ದೇಶವೂ ವ್ಯಾಪಾರ ಒಪ್ಪಂದ ಹೊಂದಬಾರದು. ರಷ್ಯಾದಿಂದ ಆಮದು ಕಡಿತಗೊಳಿಸಬೇಕು ಎಂದು ಆಗ್ರಹಿಸುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿಜಬಣ್ಣ ಈಗ ಬಯಲಾಗಿದೆ. ಅಲಾಸ್ಕಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜತೆಗೆ ನಡೆಸಿದ ದ್ವಿಪಕ್ಷೀಯ ಮಾತುಕತೆಯ ನಂತರ ಉಭಯ ನಾಯಕರು ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲೇ ಈ ವಿಚಾರ ಬಹಿರಂಗವಾಗಿದೆ. ಡೊನಾಲ್ಡ್ ಟ್ರಂಪ್ 2ನೇ ಬಾರಿ ಅಧಿಕಾರ ವಹಿಸಿಕೊಂಡ ನಂತರ ಈವರೆಗೆ ರಷ್ಯಾ ಜತೆಗಿನ ಅಮೆರಿಕದ ವ್ಯಾಪಾರ ವಹಿವಾಟು ಶೇ.20ರಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.

ರಷ್ಯಾ ಜತೆ ವ್ಯಾಪಾರ ಮಾಡಿಕೊಳ್ಳುವುದಕ್ಕಾಗಿ, ಮುಖ್ಯವಾಗಿ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಉತ್ಪನ್ನಗಳ ಮೇಲೆ ಅಮೆರಿಕ ಹೆಚ್ಚಿನ ಆಮದು ಸುಂಕ ವಿಧಿಸುತ್ತಿದೆ. ಭಾರತದ ಉತ್ಪನ್ನಗಳ ಮೇಲೂ ಕೆಲವು ದಿನಗಳ ಹಿಂದೆ ಅಮೆರಿಕ ಸುಂಕವನ್ನು ಶೇ.25 ರಷ್ಟು ಹೆಚ್ಚಿಸಿದೆ. ಇದರೊಂದಿಗೆ, ಮೂಲ ಸುಂಕ ಶೇ.25 ಹಾಗೂ ಹೆಚ್ಚುವರಿ ಸುಂಕ ಶೇ.25 ಸೇರಿ ಒಟ್ಟು ಆಮದು ಸುಂಕ ಶೇ 50 ಆಗಿದೆ.

ಸದ್ಯ ವ್ಲಾಡಿಮಿರ್ ಪುಟಿನ್ ಹಾಗೂ ಟ್ರಂಪ್ ನಡುವಣ ದ್ವಿಪಕ್ಷೀಯ ಮಾತುಕತೆಯಲ್ಲಿ ಉಕ್ರೇನ್ ಯುದ್ಧ ಸಂಬಂಧ ಮಹತ್ವದ ನಿರ್ಧಾರಕ್ಕೆ ಬರಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಹೇಳಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲಿನ ಹೆಚ್ಚುವರಿ ಸುಂಕದ ಬಗ್ಗೆ ಮುಂದಿನ 2-3 ವಾರಗಳಲ್ಲಿ ಮತ್ತೆ ಪರಿಶೀಲನೆ ನಡೆಸುವುದಾಗಿಯೂ ಹೇಳಿದ್ದಾರೆ. ಆದರೆ, ಪುಟಿನ್ – ಟ್ರಂಪ್ ಜಂಟಿ ಸುದ್ದಿಗೋಷ್ಠಿಯಿಂದ ಟ್ರಂಪ್ ಇಬ್ಬಗೆ ನೀತಿ ಬಹಿರಂಗವಾಗಿದ್ದು ಸುಳ್ಳಲ್ಲ.

Leave a Reply

Your email address will not be published. Required fields are marked *

error: Content is protected !!