60 ಟನ್ ಕಬ್ಬಿಣ ಕಳವು ಹಗರಣ: ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರಾದ ‘ಡಿಸಿಯೇ’ ಆರೋಪಿಗಳ ರಕ್ಷಣೆಗೆ ನಿಂತಿದ್ದೇಕೆ?
ಮಂಡ್ಯ: ಮಂಡ್ಯ ಜಿಲ್ಲಾ ಪಂಚಾಯತ್ ಕಚೇರಿ ಆವರಣದಲ್ಲಿದ್ದ ಅಂದಾಜು 60 ಟನ್ ತೂಕದ ಹಳೆಯ ಬೆಲೆಬಾಳುವ ಸರ್ಕಾರಿ ಕಬ್ಬಿಣದ ಸಾಮಗ್ರಿಗಳ ಅಕ್ರಮ ಕಳ್ಳತನ ಹಾಗೂ ಸಾಗಾಣಿಕೆ ಪ್ರಕರಣವು ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಈ ಹಗರಣದಲ್ಲಿ ಸ್ಥಳೀಯ ಪೊಲೀಸರ ಬೇಜವಾಬ್ದಾರಿ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿದಿರುವ ಬೆನ್ನಲ್ಲೇ, ಸ್ವತಃ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರಾಗಿರುವ ಮಂಡ್ಯ ಜಿಲ್ಲಾಧಿಕಾರಿಗಳೇ ಈ ಅಕ್ರಮಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಅತ್ಯಂತ ಗಂಭೀರ ಸ್ವರೂಪದ ಆರೋಪಗಳು ಮುನ್ನೆಲೆಗೆ ಬಂದಿವೆ.
ಪೊಲೀಸರ ಕರ್ತವ್ಯಲೋಪ ಹಾಗೂ ದೂರು ಪ್ರಾಧಿಕಾರದ ಪಾತ್ರ
ಮಂಡ್ಯ ಜಿ.ಪಂ. ಆವರಣದಲ್ಲಿದ್ದ ಅಂದಾಜು 60 ಟನ್ ಹಳೆ ಕಬ್ಬಿಣವನ್ನು ಯಾವುದೇ ಕಾನೂನುಬದ್ಧ ಹರಾಜು ಅಥವಾ ಇ-ಟೆಂಡರ್ ಇಲ್ಲದೆ 2026ರ ಮಾರ್ಚ್ 11ರಂದು ಕಳ್ಳತನದಿಂದ ಸಾಗಿಸಲಾಗಿತ್ತು. ಈ ಕುರಿತು ಪ್ರಮುಖ ಆಡಿಯೋ ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ನೀಡಿದರೂ, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಗಳು “ಆರೋಪ ಕಂಡುಬಂದಿರುವುದಿಲ್ಲ” ಎಂದು ಅರ್ಜಿಯನ್ನು ಮುಕ್ತಾಯಗೊಳಿಸಿ ಬೇಜವಾಬ್ದಾರಿ ಹಿಂಬರಹ ನೀಡಿದ್ದರು. ಪೊಲೀಸರ ಈ ಕಾನೂನುಬಾಹಿರ ಹಾಗೂ ಕಣ್ಣೊರೆಸುವ ತನಿಖೆಯ ವಿರುದ್ಧ ಮಂಡ್ಯ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಅಧಿಕೃತವಾಗಿ ದೂರು ದಾಖಲಿಸಲಾಗಿತ್ತು.
ವಿಶೇಷವೆಂದರೆ, ಈ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ಸ್ವತಃ ಮಂಡ್ಯ ಜಿಲ್ಲಾಧಿಕಾರಿಗಳೇ ಅಧ್ಯಕ್ಷರಾಗಿರುತ್ತಾರೆ. ಪ್ರಾಧಿಕಾರದ ಚುಕ್ಕಾಣಿ ಹಿಡಿದಿರುವ ಡಿಸಿಯವರಿಂದ ನ್ಯಾಯ ಸಿಗಬೇಕಿದ್ದ ಜಾಗದಲ್ಲಿ, ಮೌನ ಮತ್ತು ನಿರ್ಲಕ್ಷ್ಯವೇ ಉತ್ತರವಾಗಿರುವುದು ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಲೋಕಾಯುಕ್ತ ತನಿಖೆ ಹಾಗೂ ಸರ್ಕಾರದ ಎಚ್ಚರಿಕೆಗೂ ಕ್ಯಾರೆ ಎನ್ನದ ಡಿಸಿ

ಈ ಸಂಪೂರ್ಣ ಅಕ್ರಮದ ಕುರಿತು ಈಗಾಗಲೇ ಕರ್ನಾಟಕ ಲೋಕಾಯುಕ್ತದಲ್ಲಿ ಅಧಿಕೃತ ದೂರು ದಾಖಲಾಗಿದ್ದು (ದೂರು ಸಂಖ್ಯೆ: COMPT/UPLOK/MYS/6412/2026), ತನಿಖೆ ಪ್ರಗತಿಯಲ್ಲಿದೆ. ಕರ್ನಾಟಕ ಸರ್ಕಾರದ ರಾಜ್ಯಪಾಲರ ಪರವಾಗಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು 2026ರ ನವೆಂಬರ್ 12ರಂದು ಕಚೇರಿಯ ಬಳಕೆಗೆ ಉಪಯೋಗವಿಲ್ಲದ ಹಳೆಯ ಸಾಮಗ್ರಿಗಳ ಬಹಿರಂಗ ಹರಾಜಿಗೆ ಪ್ರಕಟಣೆ ಹೊರಡಿಸಿದ್ದರು.

ಲೋಕಾಯುಕ್ತ ತನಿಖೆ ನಡೆಯುತ್ತಿರುವಾಗ ಹರಾಜು ನಡೆಸಿದರೆ ದೂರಿನಲ್ಲಿರುವ ಪ್ರಮುಖ ಸಾಕ್ಷ್ಯಗಳು ನಾಶವಾಗುತ್ತವೆ ಎಂದು, ವಿವಾದಿತ ಹಳೆ ಕಬ್ಬಿಣದ ಸಾಮಗ್ರಿಗಳನ್ನು ಮಾತ್ರ ಹರಾಜು ಪ್ರಕ್ರಿಯೆಯಿಂದ ಕೈಬಿಡುವಂತೆ ಕೋರಿ ನವೆಂಬರ್ 2ರಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳಿಗೆ ಇಮೇಲ್ ಮೂಲಕ ತುರ್ತು ಮನವಿ ಸಲ್ಲಿಸಿದ್ದು, ಸ್ವತಃ ಮುಖ್ಯ ಕಾರ್ಯದರ್ಶಿಗಳ ಕಚೇರಿ ಕರ್ನಾಟಕ ಸರ್ಕಾರ (Chief Secretary Office) ಈ ಕುರಿತು ಸೂಕ್ತ ಕ್ರಮ ವಹಿಸುವಂತೆ ಮಂಡ್ಯ ಡಿಸಿ ಕಚೇರಿಗೆ ಇ-ಮೇಲ್ ಬಂದಿತ್ತು.

ಹರಾಜು ಪೂರ್ಣ: ಪ್ರಾಧಿಕಾರದ ಅಧ್ಯಕ್ಷರ ಕುಮ್ಮಕ್ಕಿನಿಂದಲೇ ಸಾಕ್ಷ್ಯ ನಾಶ?
ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರ ಜವಾಬ್ದಾರಿಯಲ್ಲಿರಬೇಕಾದ ಜಿಲ್ಲಾಧಿಕಾರಿಗಳು, ತಮ್ಮ ಕಚೇರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿಯಿಂದ ಮೇಲ್ ಬಂದಿದ್ದರೂ ಮತ್ತು ಲೋಕಾಯುಕ್ತ ತನಿಖೆ ಬಾಕಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಸಂಪೂರ್ಣ ಮೌನ ವಹಿಸಿದರು. ಇದರ ನೇರ ಲಾಭ ಪಡೆದ ಜಿಲ್ಲಾ ಪಂಚಾಯತ್ ಅಧಿಕಾರಿಗಳು ನವೆಂಬರ್ 12ರಂದು ನಿಗದಿತ ಹರಾಜು ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರ ಸ್ಥಾನದಲ್ಲಿ ಕುಳಿತುಕೊಂಡು, ಪೊಲೀಸ್ ಇಲಾಖೆಯ ಕರ್ತವ್ಯಲೋಪ ಹಾಗೂ ಜಿಲ್ಲಾ ಪಂಚಾಯತ್ ಅಧಿಕಾರಿಗಳ ಅಕ್ರಮ ಕಳವು ಪ್ರಕರಣ ಮುಚ್ಚಿಹೋಗಲು ಡಿಸಿಯವರೇ ಪರೋಕ್ಷವಾಗಿ ಹಸಿರು ನಿಶಾನೆ ತೋರಿದ್ದಾರೆಯೇ? ಎಂಬ ಗಂಭೀರ ಪ್ರಶ್ನೆಗಳು ಈಗ ಸಾರ್ವಜನಿಕ ವಲಯದಿಂದ ತೀವ್ರವಾಗಿ ಕೇಳಿಬರುತ್ತಿವೆ.
ಹಿಂದಿನ ದೂರುಗಳ ಕಥೆ ಮತ್ತು ಬೆಟ್ಟದಷ್ಟು ಅನುಮಾನಗಳು
ಅಧಿಕೃತ ದಾಖಲಾತಿಯ (ಸಂಖ್ಯೆ: ಎಂಡಿಸಿ-ಆರ್‍ಎಒಎಸ್‍ಟಿ2/170/2026, ದಿನಾಂಕ: 24/09/2026) ಪ್ರಕಾರ, ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ವಿರೋಧಿ ವೇದಿಕೆಯ ಜಿ.ಎಸ್. ಜಯರಾಮ್ ಅವರು ಸಲ್ಲಿಸಿದ್ದ ಮನವಿಗೆ ಅಪರ ಜಿಲ್ಲಾಧಿಕಾರಿಗಳು “ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆಗಳು ಸಮಾಂತರವಾಗಿದ್ದು, ಅರ್ಜಿದಾರರ ಕೋರಿಕೆಯಂತೆ ಈ ಹಂತದಲ್ಲಿ ಕ್ರಮವಹಿಸಲು ಅವಕಾಶವಿರುವುದಿಲ್ಲ” ಎಂದು ಹಿಂಬರಹ ನೀಡಿ ಕೈತೊಳೆದುಕೊಂಡಿದ್ದಾರೆ.

ಆದರೆ ಇಲ್ಲಿಯೂ ಒಂದು ಪ್ರಮುಖ ಪ್ರಶ್ನೆ ಹುಟ್ಟಿಕೊಳ್ಳುತ್ತದೆ, ಒಂದು ವೇಳೆ ಮೇಲಧಿಕಾರಿಗಳ ನೇರ ಕ್ರಮ ಜರುಗಿಸಲು ಅಧಿಕಾರವಿಲ್ಲದಿದ್ದರೂ ಸಹ, ಈ ಕುರಿತು ಕೂಲಂಕಷವಾಗಿ ತನಿಖೆ ನಡೆಸಿ ಅಥವಾ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರ್ಕಾರಕ್ಕೆ ಅಧಿಕೃತ ವರದಿಯನ್ನು ಸಲ್ಲಿಸಬಹುದಾಗಿತ್ತಲ್ಲವೇ? ಕೇವಲ ‘ಸಮಾಂತರ ಹುದ್ದೆ’ ಎಂಬ ತಾಂತ್ರಿಕ ಕಾರಣ ನೀಡಿ ದೂರುಗಳನ್ನು ತಿರಸ್ಕರಿಸುವುದು ಅಥವಾ ಕಡತ ಮುಳುಗಿಸುವುದು ಆಡಳಿತಾತ್ಮಕವಾಗಿ ತಪ್ಪಿತಸ್ಥರಿಗೆ ರಕ್ಷಣೆ ನೀಡಿದಂತೆ ಆಗುವುದಿಲ್ಲವೇ?
ಸರ್ಕಾರಿ ಆಸ್ತಿಯ ಕಳ್ಳತನದಂತಹ ಗಂಭೀರ ಪ್ರಕರಣಗಳಲ್ಲಿ ಜಿಲ್ಲಾಡಳಿತದ ಮೌನ ಮತ್ತು ಇಂತಹ ನಯವಾದ ಹಿಂಬರಹಗಳು ಮಂಡ್ಯ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಪಾರದರ್ಶಕ ಆಡಳಿತದ ಬಗ್ಗೆ ಜನರ ವಿಶ್ವಾಸವನ್ನು ಬುಡಮೇಳು ಮಾಡುತ್ತಿವೆ. ಲೋಕಾಯುಕ್ತ ಹಾಗೂ ಉನ್ನತ ಮಟ್ಟದ ತನಿಖೆಯ ಮೂಲಕವಾದರೂ ಈ ಹಗರಣದ ಹಿಂದಿನ ಪ್ರಭಾವಿ ಮುಖಗಳನ್ನು ಮುನ್ನೆಲೆಗೆ ತಂದು ಕಠಿಣ ಕ್ರಮ ಕೈಗೊಳ್ಳಬೇಕಿದೆ.
