Headlines

₹1 ಕೋಟಿ ವೆಚ್ಚದ ರಸ್ತೆ ಕಾಮಗಾರಿಯಲ್ಲಿ ಕಳಪೆ ಕಾಮಗಾರಿ ಆರೋಪ: ತನಿಖೆಗೆ ಆಗ್ರಹ

ಗುಂಡ್ಲುಪೇಟೆ, ಆಗಸ್ಟ್ 4: ಗುಂಡ್ಲುಪೇಟೆ ತಾಲ್ಲೂಕಿನ ಮಲ್ಲಯ್ಯನಪುರ ಗ್ರಾಮದಿಂದ ಪುತ್ತನಪುರ ಗೇಟ್ ಸಂಪರ್ಕ ಕಲ್ಪಿಸುವ ಸುಮಾರು ₹1 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ ಅವೈಜ್ಞಾನಿಕ ಹಾಗೂ ಕಳಪೆ ರೀತಿಯಲ್ಲಿ ನಡೆಯುತ್ತಿದ್ದು, ಸಾರ್ವಜನಿಕರ ಸುರಕ್ಷತೆಯನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ ಎಂದು ಗುಂಡ್ಲುಪೇಟೆ ತಾಲ್ಲೂಕು ಅಹಿಂದ ಅಧ್ಯಕ್ಷ ಶಶಿಕುಮಾರ್ ಆರೋಪಿಸಿದ್ದಾರೆ.
ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ರಸ್ತೆ ಬದಿಯಲ್ಲಿ ನಿರ್ಮಿಸಲಾಗುತ್ತಿರುವ ಚರಂಡಿ ಕಾಮಗಾರಿ ಹಲವು ಕಡೆ ಅಪೂರ್ಣವಾಗಿದ್ದು, ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಆಳವಾದ ಚರಂಡಿಗಳು ಹಾಗೂ ಗುಂಡಿಗಳನ್ನು ತೆರೆದ ಸ್ಥಿತಿಯಲ್ಲೇ ಬಿಟ್ಟಿರುವುದು ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟುಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ, ರಸ್ತೆ ಕಾಮಗಾರಿಯ ಭಾಗವಾಗಿ ನಿರ್ಮಿಸಲಾಗಿರುವ ಸಣ್ಣ ಸೇತುವೆಗಳು ಹಾಗೂ ಕ್ರಾಸ್ ಡ್ರೈನೇಜ್ ನಿರ್ಮಾಣಗಳಿಗೆ ಎರಡೂ ಬದಿಗಳಲ್ಲಿ ಕಡ್ಡಾಯವಾಗಿ ನಿರ್ಮಿಸಬೇಕಾದ ಸುರಕ್ಷತಾ ತಡೆಗೋಡೆಗಳು ನಿರ್ಮಿಸದೆ ಬಿಟ್ಟಿರುವುದು ಕಂಡುಬಂದಿದೆ. ಇದರಿಂದ ದ್ವಿಚಕ್ರ ವಾಹನ ಸವಾರರು, ಶಾಲಾ ಮಕ್ಕಳು, ಪಾದಚಾರಿಗಳು ಹಾಗೂ ಸಾರ್ವಜನಿಕರು ಅಪಘಾತಕ್ಕೀಡಾಗುವ ಅಪಾಯ ಹೆಚ್ಚಿದ್ದು, ಭಾರತೀಯ ರಸ್ತೆ ಕಾಂಗ್ರೆಸ್ ಮಾರ್ಗಸೂಚಿಗಳು ಹಾಗೂ ನಿಗದಿತ ತಾಂತ್ರಿಕ ಮಾನದಂಡಗಳಿಗೆ ಅನುಗುಣವಾಗಿ ಸುರಕ್ಷತಾ ತಡೆಗೋಡೆಗಳನ್ನು ತಕ್ಷಣ ನಿರ್ಮಿಸಬೇಕು ಎಂದು ಶಶಿಕುಮಾರ್ ಒತ್ತಾಯಿಸಿದರು.


ಸ್ಥಳದಲ್ಲಿ ರಸ್ತೆ ನಿರ್ಮಾಣಕ್ಕೆ ಬಳಸಲಾಗಿರುವ ಮಣ್ಣು ಹಾಗೂ ಇತರೆ ಸಾಮಗ್ರಿಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿರ್ವಹಿಸದೆ ಅಸ್ತವ್ಯಸ್ತವಾಗಿ ಹಾಕಿರುವುದು, ರಸ್ತೆ ಮೇಲ್ಮೈಯನ್ನು ಸಮರ್ಪಕವಾಗಿ ಸಿದ್ಧಪಡಿಸದೇ ಕಾಮಗಾರಿ ನಡೆಸುತ್ತಿರುವುದು ಹಾಗೂ ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನಗಳು ಮೂಡಿವೆ ಎಂದು ಅವರು ಆರೋಪಿಸಿದರು.
ಮಳೆಗಾಲದಲ್ಲಿ ಈ ರೀತಿಯ ಕಳಪೆ ಕಾಮಗಾರಿಯಿಂದ ರಸ್ತೆ ಶೀಘ್ರವೇ ಹಾಳಾಗುವ ಸಾಧ್ಯತೆ ಇದ್ದು, ರೈತರು, ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.


ಸಾರ್ವಜನಿಕರ ತೆರಿಗೆ ಹಣದಲ್ಲಿ ಕೈಗೊಳ್ಳಲಾಗುತ್ತಿರುವ ಈ ಕಾಮಗಾರಿಯನ್ನು ಸರ್ಕಾರದ ನಿಗದಿತ ತಾಂತ್ರಿಕ ಮಾನದಂಡಗಳು, ಲೋಕೋಪಯೋಗಿ ಇಲಾಖೆಯ ನಿಯಮಗಳು ಹಾಗೂ ಟೆಂಡರ್ ಷರತ್ತುಗಳಿಗೆ ಅನುಗುಣವಾಗಿ ಗುಣಮಟ್ಟದಿಂದ ಪೂರ್ಣಗೊಳಿಸಬೇಕಾದ ಜವಾಬ್ದಾರಿ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮೇಲಿದೆ. ಆದರೆ ಕಾಮಗಾರಿ ನಡೆಯುತ್ತಿರುವ ರೀತಿಯನ್ನು ಗಮನಿಸಿದರೆ ಗುಣಮಟ್ಟದ ಮೇಲ್ವಿಚಾರಣೆಯಲ್ಲಿ ನಿರ್ಲಕ್ಷ್ಯ ಕಂಡುಬರುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಶಶಿಕುಮಾರ್ ಹೇಳಿದರು.

ಅಲ್ಲದೆ, ತನಿಖೆಯಲ್ಲಿ ಕಾಮಗಾರಿಯಲ್ಲಿ ಗುಣಮಟ್ಟದ ಲೋಪ, ನಿರ್ಲಕ್ಷ್ಯ ಅಥವಾ ನಿಯಮ ಉಲ್ಲಂಘನೆ ದೃಢಪಟ್ಟಲ್ಲಿ ಸಂಬಂಧಪಟ್ಟ ಗುತ್ತಿಗೆದಾರರು ಹಾಗೂ ಕರ್ತವ್ಯ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಅನ್ವಯಿಸುವ ಕಾನೂನುಗಳಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಈ ಆರೋಪಗಳ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಅಧಿಕೃತ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಗುಂಡ್ಲುಪೇಟೆ ತಾಲ್ಲೂಕು ಅಹಿಂದ ಅಧ್ಯಕ್ಷ ಶಶಿಕುಮಾರ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಮಹದೇವು, ಅಹಿಂದ ಸಂಘಟನೆಯ ಸದಸ್ಯರಾದ ಮಂಟೇಶ್, ಮಹೇಶ್, ಮಹೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು, ಕಾಮಗಾರಿಯ ಗುಣಮಟ್ಟವನ್ನು ಸಮಗ್ರವಾಗಿ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಸಾರ್ವಜನಿಕರಿಗೆ ಗುಣಮಟ್ಟದ ರಸ್ತೆ ನಿರ್ಮಿಸಿ ನೀಡುವಂತೆ ಸಂಬಂಧಪಟ್ಟ ಇಲಾಖೆಯನ್ನು ಆಗ್ರಹಿಸಿದರು.

Leave a Reply

Your email address will not be published. Required fields are marked *

error: Content is protected !!