ಮಂಡ್ಯ ವಿಶ್ವವಿದ್ಯಾಲಯದ ಅಧೀನದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಸೇವೆ ಮತ್ತು ಸೌಲಭ್ಯಗಳಿಗೆ ಹೊಂದಿಕೆಯಾಗದ ಅನಗತ್ಯ ಹಾಗೂ ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದನ್ನು ವಿರೋಧಿಸಿ, ಕರ್ನಾಟಕ ರಾಷ್ಟ್ರ ಸಮಿತಿ (KRS) ರಾಜ್ಯ ಯುವ ಘಟಕದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.
ಜುಲೈ 27ರಂದು ವಿದ್ಯಾರ್ಥಿಗಳ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಂಡ್ಯ ವಿಶ್ವವಿದ್ಯಾಲಯದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅದರ ಪರಿಣಾಮವಾಗಿ ಪ್ರವೇಶದಾತಿಯ ಅಂತಿಮ ದಿನಾಂಕವನ್ನು ವಿಸ್ತರಿಸಿ ಕಾಲಾವಕಾಶ ನೀಡಲಾಗಿದೆಯಾದರೂ, ಅನಗತ್ಯವಾಗಿ ವಿಧಿಸಲಾಗಿರುವ ಹಾಗೂ ಹೆಚ್ಚಿಸಲಾಗಿರುವ ಶುಲ್ಕದಲ್ಲಿ ಯಾವುದೇ ರೀತಿಯ ಕಡಿತ ಅಥವಾ ಬದಲಾವಣೆ ಮಾಡಿಲ್ಲ ಎಂಬುದು ಪ್ರತಿಭಟನಾಕಾರರ ಮುಖ್ಯ ಆರೋಪವಾಗಿದೆ.
ಈ ದುಬಾರಿ ಶುಲ್ಕ ನೀತಿಯಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಪೋಷಕರು ಸಾಲ-ಸೋಲು ಮಾಡಿ ಹಣ ಹೊಂದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಮೂಲಭೂತ ಹಕ್ಕಾಗಿದ್ದು, ಅದನ್ನು ಆರ್ಥಿಕ ಹೊರೆಯಾಗಿಸಬಾರದು ಎಂದು ಪ್ರತಿಭಟನಾನಿರತ ನಾಯಕರು ಕಿಡಿಕಾರಿದ್ದಾರೆ.
ವಿದ್ಯಾರ್ಥಿಗಳಿಂದ ಈಗಾಗಲೇ ಅಕ್ರಮವಾಗಿ ಸಂಗ್ರಹಿಸಲಾಗಿರುವ ಹೆಚ್ಚುವರಿ ಶುಲ್ಕವನ್ನು ಕೂಡಲೇ ಮರುಪಾವತಿ (Refund) ಮಾಡಬೇಕು ಹಾಗೂ ಹೆಚ್ಚಿಸಲಾದ ಶುಲ್ಕವನ್ನು ತಕ್ಷಣವೇ ಕಡಿತಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ನ್ಯಾಯಯುತ ಬೇಡಿಕೆಗಳು ಈಡೇರುವವರೆಗೂ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಮುಂದುವರಿಯಲಿದೆ ಎಂದು KRS ಯುವ ಘಟಕ ಎಚ್ಚರಿಸಿದೆ.

ಈ ಪ್ರತಿಭಟನೆಯಲ್ಲಿ KRS ರಾಜ್ಯ ಯುವ ಘಟಕದ ಕಾರ್ಯದರ್ಶಿ ಪ್ರಮೋದ್ ಎಸ್., ಮಂಡ್ಯ ಜಿಲ್ಲಾಧ್ಯಕ್ಷ ಮಲ್ಲೇಶ ಹೆಬ್ಬಕವಾಡಿ, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ಚಂದ್ರು ಕೀಲಾರ, ಕರವೇ ಜಿಲ್ಲಾಧ್ಯಕ್ಷ ಜಯರಾಮ್, ಕರುನಾಡ ಸೇವಕರ ನಾಗಣ್ಣ, ಕರವೇ ನಾಯಕ ರಾಜೇಗೌಡ್ರು, ಯುವ ಘಟಕದ ಅಧ್ಯಕ್ಷೆ ದೀಪಿಕಾ, ತಾಲ್ಲೂಕು ಅಧ್ಯಕ್ಷರಾದ ಮಹದೇವಸ್ವಾಮಿ ಹಾಗೂ ಜಯರಾಮ್ ಸೇರಿದಂತೆ ವಿಷಕಂಠ, ಶ್ವೇತಾ, ಕಾಂತರಾಜ್, ಶಂಕರ್ ನಾಗ್, ಕೆಂಪಮ್ಮ ಹಾಗೂ ಮಲ್ಲಯ್ಯ ಮತ್ತಿತರರು ಉಪಸ್ಥಿತರಿದ್ದರು.

