Headlines

ಅಕ್ರಮ ತರಗತಿ, ಹಣ ದುರುಪಯೋಗ, ಬೆದರಿಕೆ ಆರೋಪ: ಅಮಾನತಾದ ಶೋಭರಾಣಿ ಪರ RTI ಕಾರ್ಯಕರ್ತನ ಕಸರತ್ತು!?

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಶಿಕ್ಷಣ ಕ್ಷೇತ್ರದ ಘಟನೆಯೊಂದರಲ್ಲಿ, ತೂಬಿನಕೆರೆಯ ಕಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕಿ ಶೋಭರಾಣಿ ಸಿ. ಅವರನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

​ಆಡಳಿತ ಉಪನಿರ್ದೇಶಕರು ಹೊರಡಿಸಿರುವ ಈ ಆದೇಶದ ಬೆನ್ನಲ್ಲೇ ಶಿಕ್ಷಕಿಯ ವಿರುದ್ಧ ಹಲವು ಗಂಭೀರ ಆರೋಪಗಳ ಪಟ್ಟಿ ಹೊರಬಿದ್ದಿದೆ. ಇಲಾಖೆಯ ಯಾವುದೇ ಪೂರ್ವಾನುಮತಿ ಪಡೆಯದೆ ಅಕ್ರಮವಾಗಿ ಎಲ್‌ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಿ, ಸ್ಥಳೀಯ ಅಂಗನವಾಡಿ ಕೇಂದ್ರದ ಅಸ್ತಿತ್ವಕ್ಕೇ ಧಕ್ಕೆ ತಂದಿದ್ದಾರೆ ಎಂಬುದು ಮೊದಲ ಆರೋಪ. ಅಷ್ಟೇ ಅಲ್ಲದೆ, ನಿರ್ದಿಷ್ಟ ರಾಜಕೀಯ ಪಕ್ಷದ ಹೆಸರಿದ್ದ ಯುವ ಮುಖಂಡರ ಬ್ಯಾಗ್‌ಗಳನ್ನು ಶಾಲೆಗೆ ತಂದು ವಿದ್ಯಾರ್ಥಿಗಳಿಗೆ ವಿತರಿಸುವ ಮೂಲಕ, ಶಾಲಾ ಅಂಗಳದಲ್ಲೇ ಬಹಿರಂಗವಾಗಿ ರಾಜಕೀಯ ಪಕ್ಷವೊಂದರ ಪರವಾಗಿ ಪ್ರಚಾರಕ್ಕಿಳಿದಿದ್ದರು ಎಂಬ ಆರೋಪ ಕೇಳಿಬಂದಿದೆ.

​ಇಷ್ಟಕ್ಕೇ ಮುಗಿಯದ ಈ ಪ್ರಕರಣದಲ್ಲಿ ದೊಡ್ಡ ಮಟ್ಟದ ಆರ್ಥಿಕ ದುರುಪಯೋಗದ ವಾಸನೆಯೂ ಬಡಿಯುತ್ತಿದೆ. ಶಾಲೆಯಲ್ಲಿದ್ದ ಅಡುಗೆಯವರನ್ನು ಕೆಲಸದಿಂದ ವಜಾಗೊಳಿಸಿದ ಮೇಲೆಯೂ, ಅವರ ಬ್ಯಾಂಕ್ ಖಾತೆಗೆ ಹಲವು ತಿಂಗಳುಗಳ ಕಾಲ ನಿಯಮಬಾಹಿರವಾಗಿ ವೇತನ ಜಮೆ ಮಾಡಲಾಗಿತ್ತು. ನಂತರ ಆ ಹಣವನ್ನು ಅವರಿಂದಲೇ ವಾಪಸ್ ಪಡೆದುಕೊಂಡು ಶಿಕ್ಷಕಿ ದುರುಪಯೋಗಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಶಾಲೆಗೆ ತಡವಾಗಿ ಆಗಮಿಸುವುದು, ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಜಾಗ ಖಾಲಿ ಮಾಡುವುದು ಹಾಗೂ ಕರ್ತವ್ಯದ ಅವಧಿಯಲ್ಲಿ ನಿರಂತರವಾಗಿ ಫೋನ್ ಕರೆಯಲ್ಲಿ ಮುಳುಗಿರುತ್ತಿದ್ದುದು ಇವರ ದಿನಚರಿಯಾಗಿತ್ತು ಎಂಬ ದೂರುಗಳಿವೆ.

​ಸ್ಥಳೀಯ ಗ್ರಾಮಸ್ಥರು ಜೂನ್ 20 ರಂದು ನೀಡಿದ ದೂರಿನ ಮೇರೆಗೆ ಇವರನ್ನು ಹೂತಗೆರೆ ಶಾಲೆಗೆ ನಿಯೋಜನೆ (ಕಾರ್ಯಹಂಚಿಕೆ) ಮಾಡಿ ಆದೇಶಿಸಲಾಗಿತ್ತು. ಆದರೆ, ಈ ಆದೇಶವನ್ನು ಗಾಳಿಗೆ ತೂರಿದ ಶೋಭರಾಣಿ ಉದ್ದಟತನ ಪ್ರದರ್ಶಿಸಿದ್ದರು. ತಮ್ಮ ವಿರುದ್ಧ ದೂರು ನೀಡಿದ ಪೋಷಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ಇವರು, ಆ ಪೋಷಕರ ಮಕ್ಕಳು ವ್ಯಾಸಂಗ ಮಾಡುತ್ತಿದ್ದ ಕೆಸ್ತೂರು ಪದವಿ ಪೂರ್ವ ಕಾಲೇಜಿನ (ಪ್ರೌಢಶಾಲಾ ವಿಭಾಗ) 8ನೇ ತರಗತಿಯ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಗೆ ಕರೆಸಿ, ಸಹಪಾಠಿಗಳ ಎದುರಲ್ಲೇ ಕೀಳಾಗಿ ನಿಂದಿಸಿ ಬೆದರಿಕೆಯೊಡ್ಡಿದ್ದಾರೆ. ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಗೆ ದೂರು ಕೂಡ ನೀಡಲಾಗಿದೆ.

​ಈ ಅಮಾನತು ಆದೇಶದ ಬೆನ್ನಲ್ಲೇ ಮಂಡ್ಯದ ಶಿಕ್ಷಣ ವಲಯದಲ್ಲಿ ಭಾರಿ ಹೈಡ್ರಾಮಾ ಶುರುವಾಗಿದೆ. ಈ ಆದೇಶವನ್ನು ವಿರೋಧಿಸಿ ಆರ್‌ಟಿಐ ಕಾರ್ಯಕರ್ತ ಮನು ಟಿ.ಬಿ. ನೇತೃತ್ವದಲ್ಲಿ ಡಿಡಿಪಿಐ ಕಚೇರಿ ಎದುರು ಧರಣಿ ನಡೆಸಲಾಯಿತು. ಆದರೆ, ಈ ಪ್ರತಿಭಟನೆಯಲ್ಲಿ ಸಾರ್ವಜನಿಕರ ಹುಬ್ಬೇರಿಸಿದ್ದು ಶಾಲೆಯ ಮುಗ್ಧ ಮಕ್ಕಳು! ಶಿಕ್ಷಕಿಯ ಬಚಾವ್‌ಗಾಗಿ ಕೇವಲ 6 ರಿಂದ 12 ವರ್ಷದೊಳಗಿನ ಅಪ್ರಾಪ್ತ ಮಕ್ಕಳನ್ನು ಹಾಗೂ ಅವರ ಪೋಷಕರನ್ನು ಕಚೇರಿಯ ಮುಂದೆ ತಂದು ನಿಲ್ಲಿಸಿ ಧರಣಿ ನಡೆಸಲಾಗಿತ್ತು. ಭ್ರಷ್ಟಾಚಾರದ ಆರೋಪ ಹೊತ್ತಿರುವ ಶಿಕ್ಷಕಿಯ ಬೆಂಬಲಕ್ಕೆ ಸಣ್ಣ ಮಕ್ಕಳನ್ನು ಗುರಾಣಿಯಾಗಿ ಬಳಸಿಕೊಂಡಿದ್ದನ್ನು ಕಂಡು ಸಾರ್ವಜನಿಕರು ಹಾಗೂ ಮಕ್ಕಳ ಹಕ್ಕುಗಳ ಹೋರಾಟಗಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ನೇರ ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಕಿಡಿಕಾರಿದ್ದಾರೆ.

​ಅಧಿಕೃತವಾಗಿ ಅಮಾನತು ಆದೇಶ ಹೊರಬಿದ್ದಿದ್ದರೂ, ಈ ಆರ್‌ಟಿಐ ಕಾರ್ಯಕರ್ತ ಟಿ.ಬಿ. ಮನು ಹಾಗೂ ಶಿಕ್ಷಕಿ ಶೋಭರಾಣಿ ನಡುವಿನ ‘ವಿಶೇಷ’ ಹಿತಾಸಕ್ತಿಯ ಕುರಿತು ಸಾರ್ವಜನಿಕ ವಲಯದಲ್ಲಿ ಬಿಸಿಬಿಸಿ ಚರ್ಚೆಗಳು ಕಾವು ಪಡೆದುಕೊಂಡಿವೆ. ಶಿಕ್ಷಕಿಯನ್ನು ರಕ್ಷಿಸಲು ಮುಗ್ಧ ಮಕ್ಕಳನ್ನು ಬೀದಿಗಿಳಿಸಿದ ಮನು ಅವರ ಅತಿಯಾದ ಉತ್ಸಾಹದ ಹಿಂದೆ ಅಡಗಿರುವ ಅಸಲಿ ಕಥೆಯ ಸತ್ಯಾಸತ್ಯತೆ ಏನು ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ಇನ್ನೊಂದೆಡೆ, ಸಂಜೆ ವೇಳೆಗೆ ಮದ್ದೂರು ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೂಡ ಅಮಾನತುಗೊಂಡ ಶಿಕ್ಷಕಿಯ ಪರವಾಗಿ ಬಹಿರಂಗ ಬೆಂಬಲಕ್ಕೆ ನಿಂತಿರುವುದು, ಶಿಕ್ಷಕಿ ಶೋಭಾರಾಣಿಗಿರುವ ರಾಜಕೀಯ ಹಾಗೂ ಸಂಘಟನಾತ್ಮಕ ಪ್ರಭಾವ ಎಷ್ಟರಮಟ್ಟಿಗಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!