ಮಂಡ್ಯ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಸಿಇಒ ಕೆ.ಆರ್. ನಂದಿನಿ ಅವರ ವಿರುದ್ಧ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಕೈಗೊಂಡಿರುವ ‘ಸಿಇಓ ನಂದಿನಿ ಕೆ. ಆರ್. ಹಠಾವೋ – ಮಂಡ್ಯ ಜಿಲ್ಲಾ ಪಂಚಾಯಿತಿ ಬಚಾವೋ’ ಅಹೋರಾತ್ರಿ ಧರಣಿ ಸತ್ಯಾಗ್ರಹಕ್ಕೆ ಇದೀಗ ಭಾರಿ ಬೆಂಬಲ ವ್ಯಕ್ತವಾಗಿದೆ. ಈ ಹಠಾತ್ ಹೋರಾಟದ ಅಂಗಳಕ್ಕೆ ಧುಮುಕಿರುವ ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರು ಪ್ರತಿಭಟನಾಕಾರರಿಗೆ ತಮ್ಮ ಮುಕ್ತ ಬೆಂಬಲ ಪ್ರಕಟಿಸಿ, ಆಡಳಿತದ ವಿರುದ್ಧ ಕಿಡಿಕಾಡಿದ್ದಾರೆ.
ಕಳೆದ ಮೂರು ದಿನಗಳಿಂದ ತಡೆರಹಿತವಾಗಿ ನಡೆಯುತ್ತಿರುವ ಈ ಧರಣಿಗೆ ಮಂಡ್ಯ ಜಿಲ್ಲಾ ನಾಗರಿಕ ಹಿತರಕ್ಷಣಾ ಟ್ರಸ್ಟ್, ಕಬ್ಬು ಬೆಳೆಗಾರರ ಒಕ್ಕೂಟ ಹಾಗೂ ಕೆ.ಆರ್.ಎಸ್. ಪಾರ್ಟಿ ಸೇರಿದಂತೆ ಪ್ರಮುಖ ರೈತ ಮತ್ತು ದಲಿತ ಸಂಘಟನೆಗಳು ಕೈಜೋಡಿಸಿವೆ. ಪ್ರತಿಭಟನಾ ಸ್ಥಳದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಶ್ರೀಕಂಠೇಗೌಡರು, ಜಿ.ಪಂ ಕಚೇರಿಯಿಂದಲೇ ಬರೋಬ್ಬರಿ 60 ಟನ್ ಕಬ್ಬಿಣ ದಿಢೀರನೆ ಮಾಯವಾಗಿರುವ ಗಂಭೀರ ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

ಜಿ.ಪಂ ಆವರಣದಲ್ಲಿ ನಡೆಯುತ್ತಿರುವ ಅಕ್ರಮಗಳು ಮತ್ತು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದ ಏಕಪಕ್ಷೀಯ ಧೋರಣೆಯನ್ನು ಖಂಡಿಸಿದ ಅವರು, ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಿಇಒ ಕೆ.ಆರ್. ನಂದಿನಿ ಅವರನ್ನು ಮಂಡ್ಯದಿಂದ ವರ್ಗಾಯಿಸಬೇಕು ಎಂದರು.
ಪೋಲಿಸ್ ಇಲಾಖೆಯ ಪೂರ್ಣ ಬೆಂಬಲ ಪಡೆದು ಜಿಲ್ಲಾ ಪಂಚಾಯಿತಿಯ ಆಸ್ತಿಪಾಸ್ತಿಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕು ಮತ್ತು ಸಾರ್ವಜನಿಕ ಹಣ ಪೋಲಾಗುವುದನ್ನು ತಪ್ಪಿಸಬೇಕು ಎಂದು ಅವರು ಒತ್ತಾಯಿಸಿದರು. ಧರಣಿನಿರತರ ಬೇಡಿಕೆಗಳಿಗೆ ಸರ್ಕಾರ ತಕ್ಷಣವೇ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಬೃಹತ್ ಹೋರಾಟ ರೂಪಿಸುವುದಾಗಿ ಪ್ರತಿಭಟನಾಕಾರರು ನೀಡಿರುವ ಎಚ್ಚರಿಕೆಗೆ ಶ್ರೀಕಂಠೇಗೌಡರು ಸಾಥ್ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ವೇಣುಗೋಪಾಲ್ ಸಾತನೂರು, ಭ್ರಷ್ಟಾಚಾರ ವಿರೋಧಿ ವೇದಿಕೆಯ ರಾಜ್ಯ ಉಪಾಧ್ಯಕ್ಷ ಜಯರಾಮ್, ರೈತ ಸಂಘದ ಕಾರ್ಯದರ್ಶಿ ಆನಂದ್ ಕುಮಾರ್, ಹಾಗೂ ಪ್ರಮುಖರಾದ ರಾಮಲಿಂಗೇಗೌಡ, ಚಾಮರಾಜು, ರುದ್ರೇಶ್, ರಾಣಿ, ಲೀಲಾವತಿ, ಚಲುವಣ್ಣ, ಮರಿಯಪ್ಪ, ಚಿಕ್ಕ ಮರಿಗೌಡ ಸೇರಿದಂತೆ, ಕಾರ್ಯಕರ್ತರು ಭಾಗವಹಿಸಿ ಜಿ.ಪಂ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

