ಚಾಮರಾಜನಗರ / ಕೊಳ್ಳೇಗಾಲ: ಕರ್ನಾಟಕ ಸರ್ಕಾರವು ೨೦೨೧ ರಲ್ಲೇ ಅಧಿಕೃತ ಸುತ್ತೋಲೆ / ಆದೇಶ ಹೊರಡಿಸಿದ್ದರೂ ಸಹ, ಚಾಮರಾಜನಗರ ಜಿಲ್ಲೆಯಾದ್ಯಂತ ಜನವರಿ ೨೬ (ಗಣರಾಜ್ಯೋತ್ಸವ) ಮತ್ತು ಆಗಸ್ಟ್ ೧೫ (ಸ್ವಾತಂತ್ರ್ಯ ದಿನಾಚರಣೆ) ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರವನ್ನು ಇಟ್ಟು ಕನಿಷ್ಠ ಗೌರವ ಸಮರ್ಪಣೆ ಮಾಡದಿರುವುದು ತೀವ್ರ ವಿಷಾದನೀಯ ಸಂಗತಿಯಾಗಿದೆ.
ಈ ಹಿನ್ನೆಲೆಯಲ್ಲಿ, ಚಾಮರಾಜನಗರ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಹಾಗೂ ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶಶಿಕುಮಾರ್ .ಬಿ.ಎಸ್ ಅವರ ನೇತೃತ್ವದ ನಿಯೋಗವು ಚಾಮರಾಜನಗರ ಜಿಲ್ಲಾಧಿಕಾರಿಗಳಾದ ಶ್ರೀಮತಿ ರೂಪ, ಕೊಳ್ಳೇಗಾಲ ತಾಲೂಕು ತಹಸೀಲ್ದಾರ್ ಶ್ರೀ ಬಸವರಾಜು ಹಾಗೂ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಶ್ರೀಮತಿ ಮಂಜುಳ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿತು.
ದಿನಾಂಕ ೨೬ ಜನವರಿ ಹಾಗೂ ೧೫ ಆಗಸ್ಟ್ ರಂದು ಧ್ವಜಾರೋಹಣ ಸಂದರ್ಭದಲ್ಲಿ, ದೇಶದ ಸ್ವಾತಂತ್ರ್ಯ ಹೋರಾಟದ ಹಾದಿಯಲ್ಲಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ವೀರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರವನ್ನು ಇಟ್ಟು ಗೌರವಿಸುವುದು ಪ್ರತಿಯೊಂದು ಸರ್ಕಾರಿ ಸಂಸ್ಥೆಯ ಕರ್ತವ್ಯವಾಗಿದೆ. ಆದ್ದರಿಂದ ಜಿಲ್ಲೆಯ ಗ್ರಾಮೀಣ ಮತ್ತು ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಹಾಗೂ ಅರೆ-ಸರ್ಕಾರಿ ಶಾಲೆ, ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಲ್ಲಿ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸುವಂತೆ ತಕ್ಷಣವೇ ಅಧಿಕೃತ ಆದೇಶ ಹೊರಡಿಸಬೇಕೆಂದು ಶಶಿಕುಮಾರ್ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

