ಸಿಇಒ ಕೆ.ಆರ್. ನಂದಿನಿ ಅವರ ಕಾರ್ಯವೈಖರಿಯನ್ನು ಖಂಡಿಸಿ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಮಂಡ್ಯ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದ್ದಾರೆ.
ಕೆ.ಆರ್.ಎಸ್. ಪಾರ್ಟಿ, ಭ್ರಷ್ಟಾಚಾರ ವಿರೋಧಿ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ‘ಸಿಇಒ ನಂದಿನಿ ಕೆ.ಆರ್. ಹಠಾವೋ–ಮಂಡ್ಯ ಜಿಲ್ಲಾ ಪಂಚಾಯಿತಿ ಬಚಾವೋ’ ಎಂಬ ಘೋಷಣೆಗಳೊಂದಿಗೆ ಪ್ರತಿಭಟನೆಯನ್ನು ಪ್ರಾರಂಭಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಆವರಣದಿಂದಲೇ ಲಕ್ಷಾಂತರ ರೂಪಾಯಿ ಮೌಲ್ಯದ ಸುಮಾರು 60 ಟನ್ ಕಬ್ಬಿಣ ಕಳುವಾಗಿರುವ ಆರೋಪ ಕೇಳಿಬಂದಿದ್ದರೂ, ಈ ಪ್ರಕರಣದಲ್ಲಿ ಸಮರ್ಪಕ ತನಿಖೆ ನಡೆಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ. ಈ ಪ್ರಕರಣವನ್ನು ಮುಚ್ಚಿಹಾಕಲು ನಕಲಿ ಟಪಾಲು ಪತ್ರಗಳನ್ನು ಸೃಷ್ಟಿಸಲಾಗಿದೆ ಹಾಗೂ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡಲು ನಿರಾಕರಿಸಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಹೋರಾಟದ ಕಾವು ಹೆಚ್ಚಿಸಿವೆ.
ಸರ್ಕಾರಿ ವಾಹನಗಳ ದುರ್ಬಳಕೆ, ನರೇಗಾ ಯೋಜನೆಯಲ್ಲಿ ಎನ್ಎಂಆರ್ಎಸ್ ಹಾಜರಾತಿ ಫೋಟೋಗಳಿಲ್ಲದೆ ಹಣ ವಿನಿಯೋಗ, ಕೆ.ಆರ್.ಪೇಟೆ ತಾಲೂಕಿನ ಮಂದಗೆರೆ ಗ್ರಾಮ ಪಂಚಾಯಿತಿಯ ಅವ್ಯವಹಾರ ಕುರಿತು ಓಂಬುಡ್ಸ್ಮನ್ ವರದಿ ನೀಡಿದ್ದರೂ ಕ್ರಮ ಕೈಗೊಳ್ಳದಿರುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು . ಇದರ ಜೊತೆಗೆ ಸೆಸ್ಕಾಂಗೆ ದಂಡದ ರೂಪದಲ್ಲಿ ಪಾವತಿಸಲಾದ ಹಣದ ದುರ್ಬಳಕೆ, ಅರಣೆ ಗ್ರಾಮ ಪಂಚಾಯಿತಿಯಲ್ಲಿನ ಅಕ್ರಮಗಳ ಆರೋಪ, ಪ್ರತಿ ಸೋಮವಾರ ನಡೆಯಬೇಕಿದ್ದ ಕುಂದು-ಕೊರತೆ ಸಭೆಗಳ ರದ್ದು ಹಾಗೂ ಜಲ ಜೀವನ್ ಮಿಷನ್ ಯೋಜನೆಗೆ ಸಂಬಂಧಿಸಿದ ತನಿಖೆಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಿದ್ದಾರೆ ಎಂದು ದೂರಿದರು .

ಸಾರ್ವಜನಿಕರಿಂದ ಸಲ್ಲಿಕೆಯಾಗುತ್ತಿರುವ ದೂರುಗಳಿಗೆ ಸಮರ್ಪಕ ಸ್ಪಂದನೆ ಇಲ್ಲದೆ ಏಕಪಕ್ಷೀಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿರುವ ಹೋರಾಟಗಾರರು, ಜಿಲ್ಲಾ ಪಂಚಾಯಿತಿ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಆರೋಪಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಹಾಗೂ ಸಿಇಒ ಕೆ.ಆರ್. ನಂದಿನಿ ಅವರನ್ನು ತಕ್ಷಣವೇ ಮಂಡ್ಯ ಜಿಲ್ಲೆಯಿಂದ ವರ್ಗಾಯಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸದಿದ್ದರೆ ಹೋರಾಟವನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಭ್ರಷ್ಟಾಚಾರ ವಿರೋಧಿ ವೇದಿಕೆ ರಾಜ್ಯಾಧ್ಯಕ್ಷರಾದ ಶಿವರಾಮು, ಉಪಾಧ್ಯಕ್ಷ ಗಾಣದಾಳು ಜಯರಾಮ , ಕೆಆರ್ಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಹೆಬ್ಬಕ್ಕವಾಡಿ ಮಲ್ಲೇಶ್, ಚಂದ್ರು ಕಿಲಾರ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಕಂಚನಹಳ್ಳಿ ದೇವರಾಜ್, ಅರಣಿ ವೇದಮೂರ್ತಿ,ರೈತ ಸಂಘದ ಮುಖಂಡರುಗಳಾದ ಆನಂದ್ ಕುಮಾರ್, ಡಾ. ವೆಂಕಟೇಶ್, ರುದ್ರೇಶ್ ಚೆಲುವಣ್ಣ, ಸ್ವಾಮಿ ಗೌಡ, ಹುಲಿವಾನ ಸಾಗರ್ , ಮಂದಗೆರೆ ಭರತ್, ಚಾಮರಾಜು ಇದ್ದರು

