ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಮಂಡ್ಯ ಜಿಲ್ಲೆಯಲ್ಲಿ ಹಬ್ಬದ ಶುಭಕೋರುವ ಫ್ಲೆಕ್ಸ್‌ಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಫೋಟೋ ಬಳಕೆಯಾಗಿ ದೊಡ್ಡಮಟ್ಟದ ವಿವಾದ ಸೃಷ್ಟಿಸಿದ ಬೆನ್ನಲ್ಲೇ, ಈಗ ಗಡಿ ಜಿಲ್ಲೆ ಚಾಮರಾಜನಗರದಲ್ಲೂ ಅಂತಹದ್ದೇ ಬೆಳವಣಿಗೆಯೊಂದು ಮುನ್ನೆಲೆಗೆ ಬಂದಿದೆ. ಖಾಸಗಿ ಕಾರ್ಯಕ್ರಮಗಳ ಪ್ರಚಾರಕ್ಕಾಗಿ ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಗಳ ಭಾವಚಿತ್ರಗಳನ್ನು ಫ್ಲೆಕ್ಸ್‌ಗಳಲ್ಲಿ ಬಳಸಿರುವುದು ಈಗ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಚಾಮರಾಜನಗರ ವಿಶ್ವವಿದ್ಯಾನಿಲಯ ಹಾಗೂ ಮೈಸೂರಿನ ಶ್ರೀ ಯೋಗಿನಾರಾಯಣ ಯತೀಂದ್ರರ ಪ್ರಚಾರ ಸಭಾ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಕೈವಾರ ತಾತಯ್ಯನವರ ವಿಚಾರ ಸಂಕಿರಣ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ನಿಮಿತ್ತ ನಗರದಾದ್ಯಂತ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಆದರೆ, ಈ ಫ್ಲೆಕ್ಸ್‌ಗಳಲ್ಲಿ ಅತಿಥಿಗಳಾಗಿ ಭಾಗವಹಿಸುವ ಜಿಲ್ಲಾ ಮಟ್ಟದ ಅಧಿಕಾರಿಗಳ ಫೋಟೋಗಳನ್ನು ದೊಡ್ಡದಾಗಿ ಹಾಕಲಾಗಿದ್ದು, ಇದು ಅಧಿಕೃತವೋ ಅಥವಾ ಅನಧಿಕೃತವೋ ಎಂಬ ಪ್ರಶ್ನೆ ಮೂಡಿದೆ. ಅಧಿಕಾರಿಗಳ ಅನುಮತಿ ಪಡೆದೇ ಈ ಫೋಟೋಗಳನ್ನು ಬಳಸಲಾಗಿದೆಯೇ ಅಥವಾ ಆಯೋಜಕರು ಅತಿ ಉತ್ಸಾಹದಿಂದ ಇಂತಹ ಕೆಲಸ ಮಾಡಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ವ್ಯಕ್ತವಾಗುತ್ತಿದೆ.
ಇತ್ತೀಚೆಗಷ್ಟೇ ರಾಜ್ಯದ ಉಪಮುಖ್ಯಮಂತ್ರಿಗಳು ಅನಧಿಕೃತ ಫ್ಲೆಕ್ಸ್ ಅಳವಡಿಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದ್ದರು. ಇಷ್ಟಾದರೂ ನಗರಸಭೆ ಅಧಿಕಾರಿಗಳು ಇಂತಹ ಫ್ಲೆಕ್ಸ್‌ಗಳ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳ ಗೌರವಕ್ಕೆ ಧಕ್ಕೆ ತರುವಂತೆ ಅಥವಾ ಅವರ ಹೆಸರನ್ನು ಪ್ರಚಾರಕ್ಕೆ ಬಳಸಿಕೊಳ್ಳುವ ಸಂಸ್ಕೃತಿ ಹಂತ ಹಂತವಾಗಿ ಎಲ್ಲ ಜಿಲ್ಲೆಗಳಿಗೂ ಹರಡುತ್ತಿದೆ. ಇಂತಹ ಫ್ಲೆಕ್ಸ್ ಅಳವಡಿಸಿದವರ ವಿರುದ್ಧ ನಗರಸಭೆ ದಂಡ ಹಾಕುತ್ತದೆಯೇ? ಅಥವಾ ಅಧಿಕಾರಿಗಳ ಪ್ರಭಾವಕ್ಕೆ ಮಣಿದು ಸುಮ್ಮನಾಗುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

