Headlines

ಖಂಡ್ರೆ ಕಾಲಿಡುತ್ತಿದ್ದಂಗೆ ಶುರುವಾಯ್ತ ಅಕ್ರಮ…!?

ಸರ್ಕಾರಿ ಆದೇಶದ ಹೆಸರಲ್ಲಿ ಗ್ರೇಡ್-1 ಕಾರ್ಯದರ್ಶಿಗಳ ಜೇಷ್ಠತಾ ಪಟ್ಟಿ ಮತ್ತು ಮುಂಬಡ್ತಿ ಪ್ರಕ್ರಿಯೆಯಲ್ಲಿ ಕೋಟ್ಯಂತರ ರೂಪಾಯಿಗಳ ಭ್ರಷ್ಟಾಚಾರದ ದಂಧೆ ನಡೆದಿರುವ ಗಂಭೀರ ಆರೋಪ ಕೇಳಿಬಂದಿದೆ.

ದಿನಾಂಕ 15-07-2023ರ ಸರ್ಕಾರಿ ಆದೇಶದ ಅನ್ವಯ 2024ರಿಂದಲೇ ಈ ಜೇಷ್ಠತಾ ಪಟ್ಟಿ ಸಿದ್ಧಪಡಿಸುವ ಕಾರ್ಯ ಆರಂಭವಾಗಿದ್ದರೂ, ಕಳೆದ ಎರಡು ವರ್ಷಗಳಲ್ಲಿ ಸಭೆ ಮತ್ತು ನಿರ್ದೇಶನಗಳ ಹೆಸರಿನಲ್ಲಿ ಬರೊಬ್ಬರಿ 50ರಿಂದ 70ಕ್ಕೂ ಹೆಚ್ಚು ಬಾರಿ ಸಭೆಗಳನ್ನು ನಡೆಸಲಾಗಿದೆ. ಆದರೆ, ಪ್ರತಿ ಬಾರಿಯೂ ಯಾವುದೇ ಸೂಕ್ತ ಕಾರಣವಿಲ್ಲದೆ ಪ್ರಕ್ರಿಯೆಯನ್ನು ಮುಂದೂಡುತ್ತಾ ಕಾಲಹರಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಡಿ.ಡಿ ಗಗನ್ ಹಾಗೂ 2024ರಿಂದ 2026ರವರೆಗೆ ಕಮಿಷನರ್ ಆಗಿ ಅಧಿಕಾರದಲ್ಲಿರುವ ಅರುಂಧತಿ ಚಂದ್ರಶೇಖರ್ ಅವರ ಅವಧಿಯಲ್ಲೇ ಈ ವಿಳಂಬ ನೀತಿ ಮುಂದುವರಿದಿದ್ದು, ಅಂತಿಮವಾಗಿ 30 ಡಿಸೆಂಬರ್ 2025 ರಂದು ಕರಡು ಪಟ್ಟಿಯನ್ನು ಪ್ರಕಟಿಸಲಾಗಿತ್ತು.

​ಒಟ್ಟು 500+100 ಹುದ್ದೆಗಳ ಮುಂಬಡ್ತಿಗಾಗಿ ಸಿದ್ಧಪಡಿಸಲಾದ ಈ ಪಟ್ಟಿಯ ಹಿಂದೆ ಕಳೆದ 6 ತಿಂಗಳಲ್ಲಿ ಭಾರಿ ಪ್ರಮಾಣದ ವಸೂಲಾತಿ ದಂಧೆ ನಡೆದಿದೆ ಎನ್ನಲಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರೇಡ್-1 ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಮುನಿರಾಜು ಹಾಗೂ ಯಾದಗಿರಿ ಜಿಲ್ಲೆಯ ಮೊಹಮ್ಮದ್ ಅಲಿ ಅವರು ಈ ವಸೂಲಾತಿಯ ಮುಂಚೂಣಿಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಮುಂಬಡ್ತಿ ಆಕಾಂಕ್ಷಿ ಪ್ರತಿ ಕಾರ್ಯದರ್ಶಿಯಿಂದ ತಲಾ 2 ಲಕ್ಷ ರೂಪಾಯಿ ಹಣವನ್ನು ನೇರವಾಗಿ ಡೆಪ್ಯುಟಿ ಡೈರೆಕ್ಟರ್ ಮೂಲಕ ಕಲೆಕ್ಟ್ ಮಾಡಲಾಗಿದ್ದು, ಈ ಮೂಲಕ ಸಂಗ್ರಹವಾದ ಅತಿ ದೊಡ್ಡ ಮೊತ್ತವನ್ನು ಪರೋಕ್ಷವಾಗಿ ಕಮಿಷನರ್ ಅವರಿಗೆ ತಲುಪಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಂದಿದೆ.

ಇದರ ಬೆನ್ನಲ್ಲೇ ಡಿಪಿಸಿ (DPC) ಪ್ರಕ್ರಿಯೆಗಾಗಿ ಕಳೆದ ತಿಂಗಳಿನಲ್ಲಿ ಅಧಿಕಾರಿಗಳಿಗೆ ತಲಾ 5 ರಿಂದ 10 ಲಕ್ಷ ರೂಪಾಯಿಗಳ ಪ್ರತ್ಯೇಕ ಲಂಚ ನೀಡಲಾಗಿರುತ್ತದೆ ಎನ್ನಲಾಗಿದೆ.

ಕಮಿಷನರ್ ಡಾ.ಅರುಂಧತಿ ಚಂದ್ರಶೇಖರ್

ವಿಶೇಷವೆಂದರೆ, ಕಮಿಷನರ್ ಡಾ.ಅರುಂಧತಿ ಚಂದ್ರಶೇಖರ್ ಅವರು ತಮ್ಮ ಸುದೀರ್ಘ 3 ವರ್ಷಗಳಿಗೂ ಹೆಚ್ಚಿನ ಸೇವಾವಧಿಯಲ್ಲಿ ಖಜಾನೆ ಇಲಾಖೆಯಲ್ಲಿ (Treasury Dept) ಯಾರಿಗೂ ಮುಂಬಡ್ತಿ ನೀಡಿರಲಿಲ್ಲ. ಆದರೆ ಇತ್ತೀಚೆಗೆ ರಾಜ್ಯದಲ್ಲಿ ಸಚಿವರ ಬದಲಾವಣೆಯಾಗುತ್ತಿದ್ದಂತೆ, ಕೇವಲ ಕಳೆದ 15 ದಿನಗಳಿಂದ ಡಿಪಿಸಿ ಕಾರ್ಯಗಳು ತರಾತುರಿಯಲ್ಲಿ ರಾತ್ರಿ ಪಾಳಿ, ಮಧ್ಯರಾತ್ರಿ ಹಾಗೂ ಸಾರ್ವಜನಿಕ ರಜೆ ದಿನಗಳಲ್ಲೂ ಕಚೇರಿ ಅವಧಿಯ ನಂತರ ಅತ್ಯಂತ ರಹಸ್ಯವಾಗಿ ನಡೆಯುತ್ತಿವೆ. ಮತ್ತೊಂದೆಡೆ ಜಿಲ್ಲಾ ಪಂಚಾಯತ್‌ನ ಹಳೇ ಡಿಪಿಸಿ ಕಾರ್ಯದರ್ಶಿಗಳಿಗೆ ಕಳೆದ 3 ವರ್ಷಗಳಿಂದ ಮುಂಬಡ್ತಿ ಸಿಗದೆ ಅನ್ಯಾಯವಾಗಿದ್ದು, ಈ ನಿಟ್ಟಿನಲ್ಲಿ ಇಂದಿಗೂ ಪ್ರತಿದಿನ 10ಕ್ಕೂ ಹೆಚ್ಚು ಕಾರ್ಯದರ್ಶಿಗಳು ಕೆಪಿಆರ್‌ಸಿ (KPRC) ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ ಇವರ ಜೀವಾಳವಾಗಿರುವ ಫೈಲ್ ಕಮಿಷನರ್ ಬಳಿಯಲ್ಲೇ ಧೂಳು ಹಿಡಿಯುತ್ತಾ ಬಾಕಿ ಉಳಿದುಕೊಂಡಿದೆ. ಹುದ್ದೆಗಾಗಿ ಹಣ ಕೊಟ್ಟವರಿಗೆ ಮಧ್ಯರಾತ್ರಿಯಲ್ಲೂ ಕೆಲಸ ನಡೆಯುತ್ತಿದ್ದರೆ, ಇಲಾಖೆಗಾಗಿ ದುಡಿದವರ ಕಡತಗಳು ಮಾತ್ರ ಕಮಿಷನರ್ ಮೇಜಿನಿಂದ ಕದಡುತ್ತಿಲ್ಲ ಎಂಬ ಆಕ್ರೋಶ ನೌಕರರ ವಲಯದಲ್ಲಿ ತೀವ್ರಗೊಂಡಿದೆ.

Leave a Reply

Your email address will not be published. Required fields are marked *

error: Content is protected !!