ಶ್ರೀರಂಗಪಟ್ಟಣ: ತಾಲ್ಲೂಕಿನ ಹುಲಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಂಗಹಳ್ಳಿ ಗ್ರಾಮದಲ್ಲಿ ನಿಯಮಬಾಹಿರವಾಗಿ ಅಂಬೇಡ್ಕರ್ ಭವನವನ್ನು ನೆಲಸಮಗೊಳಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಶ್ರೀನಿವಾಸ್ ಕೆ. ಅವರನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದರೆ, ಅಮಾನತು ಆದೇಶ ಹೊರಬಿದ್ದರೂ ಅಧಿಕಾರಿ ಇಂದಿಗೂ ಕರ್ತವ್ಯದಲ್ಲಿ ಮುಂದುವರಿದಿರುವುದು ಸಾರ್ವಜನಿಕರಲ್ಲಿ ತೀವ್ರ ಅನುಮಾನಗಳಿಗೆ ಕಾರಣವಾಗಿದೆ.
ಪ್ರಕರಣದ ಹಿನ್ನೆಲೆ:
ಹೊಂಗಹಳ್ಳಿ ಗ್ರಾಮದ ಅಂಬೇಡ್ಕರ್ ಭವನದ ದುರಸ್ತಿಗಾಗಿ 2025-26ನೇ ಸಾಲಿನ ಶೇ. 25ರ ನಿಧಿಯಡಿ ಕ್ರಿಯಾ ಯೋಜನೆ ಸಲ್ಲಿಸಲಾಗಿತ್ತು. ಆದರೆ, ಈ ಸಂಬಂಧ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಅಥವಾ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಂದ ಯಾವುದೇ ಪೂರ್ವಾನುಮತಿ ಪಡೆಯದೆಯೇ ಅಂಬೇಡ್ಕರ್ ಭವನವನ್ನು ನೆಲಸಮ ಮಾಡಲಾಗಿತ್ತು.
ಅಷ್ಟೇ ಅಲ್ಲದೆ, ಕಳೆದ ಜನವರಿ 26, 2026 ರಂದು ಹಿರಿಯ ಅಧಿಕಾರಿಗಳು ಹಾಗೂ ಗಣ್ಯರ ಗಮನಕ್ಕೆ ತರದೆ ನಿಯಮಬಾಹಿರವಾಗಿ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ದೂರುಗಳು ಕೇಳಿಬಂದಿದ್ದವು.

ಕಾರಣ ಕೇಳಿ ನೋಟಿಸ್:
ಈ ಗಂಭೀರ ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಒ ಶ್ರೀನಿವಾಸ್ ಅವರಿಗೆ 24 ಗಂಟೆಯೊಳಗೆ ಲಿಖಿತ ಸಮಾಜಾಯಿಷಿ ನೀಡುವಂತೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು. ಇಲ್ಲದಿದ್ದರೆ ಕರ್ನಾಟಕ ಸರ್ಕಾರಿ ಸೇವಾ ನಿಯಮಗಳು 1957 (ಸಿಸಿಎ) ಅನ್ವಯ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಸಲಾಗಿತ್ತು.

CEO ಅವರಿಂದ ಅಧಿಕೃತ ಅಮಾನತು ಆದೇಶ:
ಪ್ರಸ್ತಾವನೆಯಲ್ಲಿದ್ದ ಎಲ್ಲಾ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು (CEO), ಪಿಡಿಒ ಶ್ರೀನಿವಾಸ್ ಕೆ. ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದಾರೆ. ಆದೇಶ ಸಂಖ್ಯೆ: ಉಕಾ1:ಸಿ2:ಪಿಡಿಒ:ಸಿಆರ್-149:2025-26, ದಿನಾಂಕ: 12-06-2026 ರನ್ವಯ ಅಧಿಕಾರಿಯನ್ನು ಸೇವೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಲಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜೂನ್ 12, 2026 ರಂದೇ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದರೂ ಕೂಡ, ಹುಲಿಕೆರೆ ಪಿಡಿಒ ಶ್ರೀನಿವಾಸ್ ರವರು ಇಲ್ಲಿಯವರೆಗೂ ಯಾವುದೇ ಆತಂಕವಿಲ್ಲದೆ ಎಂದಿನಂತೆ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಲೇ ಇದ್ದಾರೆ.
ಸಿಇಒ ಅವರ ಅಧಿಕೃತ ಆದೇಶಕ್ಕೆ ಪಂಚಾಯಿತಿಯಲ್ಲಿ ಬೆಲೆಯೇ ಇಲ್ಲದಂತಾಗಿದೆಯೇ? ಅಥವಾ ಈ ಅಕ್ರಮದ ಹಿಂದೆ ಬೇರೆ ಪ್ರಭಾವಿ ಶಕ್ತಿಗಳ ಕೈವಾಡವಿದೆಯೇ ಎಂಬ ಅನುಮಾನ ಮೂಡಿದೆ.
ಸರ್ಕಾರಿ ನಿಯಮಗಳನ್ನು ಉಲ್ಲಂಘಿಸುವ ಮತ್ತು ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿದೆಯಾದರೂ, ವಾಸ್ತವದಲ್ಲಿ ಅಮಾನತುಗೊಂಡ ಅಧಿಕಾರಿಯೇ ಇನ್ನೂ ಕುರ್ಚಿಯಲ್ಲಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಮೇಲಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ ವಿರುದ್ಧ ಉನ್ನತ ಅಧಿಕಾರಿಗಳು ಇನ್ನಾದರೂ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಆದೇಶವನ್ನು ಜಾರಿಗೊಳಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

