ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ
ಚಾಮರಾಜನಗರ: ಇ ಖಾತಾ ಮಾಡಿಕೊಡಲು ಸಾರ್ವಜನಿಕರಿಂದ ಬರೋಬ್ಬರಿ 25 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಚಾಮರಾಜನಗರ ನಗರಸಭೆಯ ಇಬ್ಬರು ಅಧಿಕಾರಿಗಳು ಹಾಗೂ ಓರ್ವ ಮಧ್ಯವರ್ತಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಚಾಮರಾಜನಗರದ ನಗರಸಭೆ ಕಚೇರಿಯಲ್ಲಿಯೇ ಈ ಹೈಡ್ರಾಮಾ ನಡೆದಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

ನಗರಸಭೆಯ ಕಂದಾಯ ಅಧಿಕಾರಿ (RO) ಹೇಮಂತ್ ಕುಮಾರ್, ಕಂದಾಯ ನಿರೀಕ್ಷಕ (RI) ಶಕೀಲ್ ಅಹಮ್ಮದ್ ಹಾಗೂ ಲಂಚದ ಹಣ ವಸೂಲಿಗೆ ನಿಂತಿದ್ದ ದಲ್ಲಾಳಿ ಹಬೀಬ್ ಸಿಕ್ಕಿಬಿದ್ದ ಆರೋಪಿಗಳು. ಸಾರ್ವಜನಿಕರೊಬ್ಬರು ಇ ಖಾತಾ ಮಾಡಿಕೊಡುವಂತೆ ಕಚೇರಿಗೆ ಅಲೆದಾಡುತ್ತಿದ್ದರು. ಆದರೆ ಅಧಿಕಾರಿಗಳು ಮಧ್ಯವರ್ತಿ ಹಬೀಬ್ ಮೂಲಕ 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ. ಈ ಕುರಿತು ನೊಂದ ದೂರುದಾರ ನಾಗರಾಜು ಎಂಬುವವರು ಲೋಕಾಯುಕ್ತರ ಮೊರೆ ಹೋಗಿದ್ದರು.
ಯೋಜನೆಯಂತೆಯೇ ದೂರುದಾರ ನಾಗರಾಜು ಅವರಿಂದ ಮಧ್ಯವರ್ತಿ ಹಬೀಬ್ ಹಾಗೂ ಅಧಿಕಾರಿಗಳು ನಗರಸಭೆ ಕಚೇರಿಯಲ್ಲೇ ಹಣ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಲಂಚದ ಹಣದ ಸಮೇತ ಮೂವರನ್ನೂ ಜಿಟಿಜಿಟಿ ನೋಟುಗಳೊಂದಿಗೆ ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆಯಲಾಗಿದೆ.
ಲೋಕಾಯುಕ್ತ ತನಿಖಾಧಿಕಾರಿ ಲೋಹಿತ್ ನೇತೃತ್ವದಲ್ಲಿ ಹಾಗೂ ಡಿವೈಎಸ್ಪಿ ಗಜೇಂದ್ರಪ್ರಸಾದ್ ಅವರ ಖಡಕ್ ಮಾರ್ಗದರ್ಶನದಲ್ಲಿ ಈ ಸದ್ದಿಲ್ಲದ ಕಾರ್ಯಾಚರಣೆ ನಡೆದಿದೆ. ದಾಳಿಯ ಬೆನ್ನಲ್ಲೇ ನಗರಸಭೆ ಕಚೇರಿಯಲ್ಲೇ ಅಧಿಕಾರಿಗಳನ್ನು ಕೂರಿಸಿಕೊಂಡು ಲೋಕಾಯುಕ್ತ ಸಿಬ್ಬಂದಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಚಾಮರಾಜನಗರ ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಮಿತಿಮೀರಿದೆ, ಪ್ರತಿಯೊಂದು ಕೆಲಸಕ್ಕೂ ಬ್ರೋಕರ್ ಇರಲೇಬೇಕು ಎಂಬ ವ್ಯಾಪಕ ದೂರುಗಳು ಸಾರ್ವಜನಿಕರಿಂದ ಕೇಳಿಬರುತ್ತಿದ್ದವು. ಸದ್ಯ ಲೋಕಾಯುಕ್ತರು ನಡೆಸಿರುವ ಈ ದಿಢೀರ್ ಬೇಟೆಯಿಂದಾಗಿ ಭ್ರಷ್ಟ ಅಧಿಕಾರಿಗಳು ಹಾಗೂ ದಲ್ಲಾಳಿಗಳ ಪಡಸಾಲೆಯಲ್ಲಿ ನಡುಕ ಶುರುವಾಗಿದೆ.

