Headlines

ಗೌರಿಬಿದನೂರು EO ಸಾಹೇಬರ ಸಾಮ್ರಾಜ್ಯ!

ವರದಿ : ನಾರ. ವೆಂಕಟೇಶ್ ಮೂರ್ತಿ
ಮೊ. ಸಂ= 7411173919

ಹೊನ್ನಯ್ಯ ಎಂಬ ಹೆಸರಿನ ಈ ಸಾಹೇಬರು ಕಳೆದ ಎರಡು ವರ್ಷಗಳಿಂದ ಇಲ್ಲಿರುತ್ತಾರೆ. ಇವರ ಅಧಿಕಾರಾವಧಿಯಲ್ಲಿ ಬಹುತೇಕ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯವಸ್ಥೆ ಎಕ್ಕುಟ್ಟಿ ಹೋಗಿರುವುದು ಅಲ್ಲಲ್ಲೇ ಕಾಣಿಸುತ್ತದೆ. ಆದರೆ ಇವುಗಳ ಜವಾಬ್ದಾರಿ ಹೊತ್ತ ಇಯಪ್ಪ ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ. ಅದಕ್ಕಿಂತ ಮುಂಚೆ ಪ್ರಸ್ತುತ ಪಂಚಾಯಿತಿ ಪಿಡಿಒ ಒಬ್ಬರ ಅಕ್ರಮ ಕಾರ್ಯವೈಖರಿ ಹೇಗಿರುತ್ತದೆ ಎಂದು ಸ್ಯಾಂಪಲ್ ನೋಡೋಣ.

ಇದು ತೊಂಡೆಬಾವಿ ಎಂಬ ಗ್ರಾಮ ಪಂಚಾಯಿತಿ ಕಥೆ. ಈ ಪಂಚಾಯಿತಿಗೆ ಒಂದು ಕೋಟಿ ಹತ್ತು ಲಕ್ಷ ರೂಗಳ ಮೇಲ್ಪಟ್ಟು ವಾರ್ಷಿಕ ಆದಾಯ ಇದೆ. ಆದರೆ ಯಾವುದೇ ಸ್ವಚ್ಛತೆ, ನೈರ್ಮಲ್ಯ, ಮೂಲಭೂತ ಸೌಕರ್ಯ ಇತರೆಗಳಿಗೆ ಆದ್ಯತೆ ನೀಡಿರುವುದು ಮಾತ್ರ ಕಂಡುಬರುವುದಿಲ್ಲ. ಈ ಹಿಂದಿನ ಪಿಡಿಒ ಕಾಲದಲ್ಲಿ ಇಲ್ಲಿ ನಡೆದಿರುವ ಅಕ್ರಮ ಅನಾಹುತಗಳು ಒಂದೊಂದಲ್ಲ. ಲೇಔಟ್ಗಳ ಅಕ್ರಮ ಖಾತೆಗಳು, ಹಿಂದು ಮುಂದಿಲ್ಲದ ಕಂದಾಯ ಜಾಗಗಳ ಅಕ್ರಮ ಖಾತೆ, ಅಕ್ರಮ ಕಾಮಗಾರಿಗಳು, ಕಂದಾಯ ವಸೂಲಿಯಲ್ಲಿ ಗೋಲ್ಮಾಲ್ ಹೀಗೆ ಎಲ್ಲಾ ಮೂಲಗಳಿಂದ ಚೆನ್ನಾಗಿ ಗಂಟು ಕಟ್ಟಿಕೊಂಡು ಹೋಗಿದ್ದಾರೆ. ಅವರು ಹೋದವರು ಹೋದರು. ಈಗ ಬಂದು ಕೂತಿರುವ ಮಹಾತಾಯಿಯ ಹೆಸರು ಶ್ರೀಮತಿ ಪೃಥ್ವಿ ಭಾ. ಈಕೆ ಅದೆಲ್ಲಿ ವಕ್ಕರಿಸಿದ್ದಳೋ ಗೊತ್ತಿಲ್ಲ ಮೇಲ್ನೋಟಕ್ಕೆ ಮಾತಾಡುವ ಮಾತಂತೂ ತುಂಬಾ ಸ್ವಾಭಾವಿಕ ಮತ್ತು ಮೃದುವಾಗಿರುತ್ತದೆ. ಹೆಣ್ಣು ಮಗಳಲ್ಲವೇ ಅಷ್ಟು ಮಾತ್ರ ಇರಲೇಬೇಕು ಅನ್ನಿ. ಆದರೆ ನಡೆದುಕೊಳ್ಳುವ ರೀತಿಯಲ್ಲಿ ತಿಳಿದು ಬರುತ್ತೆ ಈಕೆ ಎಂತಹ ಅಹಂಕಾರಿ ಎಂದು. ಕಾನೂನು ಕಟ್ಟಳೆಗಳೆಂದರೆ ಈಕೆಯ ಕಾಲ ಕೆಳಗಿನ ಕಸದಂತೆ ನೋಡುತ್ತಾಳೆ. ಅಷ್ಟೇ ಅಲ್ಲದೆ ಇಲ್ಲಿನ ಸ್ಥಳೀಯ ಸಾರ್ವಜನಿಕರು, ಕೆಲ ಸಿಬ್ಬಂದಿ ಮತ್ತು ಕೆಲವು ಜನ ಪ್ರತಿನಿಧಿಗಳ ಬಾಯಲ್ಲೇ ಬರುವ ಹಾಗೆ ಟಾಕು ಟೀಕಾಗಿ ಬರುತ್ತಾಳೆ. ಮೈ ತುಂಬಾ ಮೇಕಪ್ಪು ಒಡವೆಗಳ ಒಡ್ಡಾಣ ಕೆಲಸ ಕಾರ್ಯ ಮಾತ್ರ ಇಲ್ಲ ಎಂಬ gossip ಗಳಿವೆ. ಆಕೆಯ ಮೇಕಪ್ಪು ಒಡವೆ ಇತ್ಯಾದಿಗಳು ಏನಿದ್ದರೂ ಆಕೆಯ ಖಾಸಗಿತನಕ್ಕೆ ಸಂಭಂದಿಸಿದ್ದು ನಮಗೆ ಬೇಕಿಲ್ಲ ಬಿಡಿ. ಆದರೆ ಒಬ್ಬ ಅಧಿಕಾರಿಯಾಗಿ ಅಲ್ಲಿ ನಿಭಾಯಿಸಬೇಕಾದ ಕೆಲಸಗಳು ಎಷ್ಟು ಮಾತ್ರ ನಿಭಾಯಿಸುತ್ತಿದ್ದಾರೆ ಎಂದು ನೋಡಿದರೆ ಅವರು ಒತ್ತಡಕ್ಕೆ ಮಣಿದಿದ್ದಾರೋ ಅಥವಾ ಅವರ ಸ್ವಭಾವವೇ ಹಾಗೋ? ಇಲ್ಲ ಅವರ ಕಾರ್ಯ ಶೈಲಿಯೇ ಅಂತದ್ದೋ ಅವರೇ ಹೇಳಬೇಕು. ಮಾಹಿತಿ ಹಕ್ಕು ಅಧಿನಿಯಮದಡಿ ಏನೇ ಕೇಳಿದರು ಆಕೆ ಕೊಡುವುದಿಲ್ಲ. ಕೊಟ್ಟಿಲ್ಲ ಎಂದು ಮೇಲ್ಮನವಿ ಸಲ್ಲಿಸಿದರೆ ಪ್ರಕರಣ ನಡೆಸಲು ದಿನಾಂಕವನ್ನು ನಮೂದಿಸಿ ಒಂದು ಪತ್ರ ಕಳಿಸಿ ಕೈ ತೊಳೆದುಕೊಳ್ಳುತ್ತಾರೆ. ಪ್ರಕರಣದ ದಿನಾಂಕದಂದು ನೀವು ಹಾಜರಾದಿರೆಂದರೆ ಮೂರ್ಖರೇ ಸರಿ. ಏಕೆಂದರೆ ಆ ದಿನ ಆಕೆ ಅಲ್ಲಿ ಇರುವುದಿಲ್ಲ ಮತ್ತು ನಿಮ್ಮ ಕರೆಯನ್ನು ಕೂಡ ಸ್ವೀಕರಿಸುವುದಿಲ್ಲ ಯಾವ ಅಧಿಕಾರಿ ಒಂದು ಮಾಹಿತಿ ನೀಡಲು ಹಿಂಜರಿಯುತ್ತಾರೋ ಅಥವಾ ಮಾಹಿತಿಯ ಬದಲು ದುಡ್ಡು ನೀಡಲು ಮುಂದಾಗುತ್ತಾರೋ ಅಲ್ಲಿಗೆ ಅಲ್ಲೊಂದು ಭ್ರಷ್ಟಾಚಾರದ ಕೂಪವೇ ಇದೆ ಎನ್ನುವುದು ಬಿಡಿಸಿ ಹೇಳುವ ಅಗತ್ಯವೇ ಇಲ್ಲ. ಮುಂದುವರೆದು ಈಕೆ ಎಂತ ಎಡವಳೆಂದರೆ ಒಮ್ಮೆ ಇವರ ಪಂಚಾಯತಿ ವ್ಯಾಪ್ತಿಯ ರೈಲ್ವೆ ನಿಲ್ದಾಣದ ಮುಂದೆ ಇರುವ ಸರ್ಕಾರಿ ಜಾಹೀರಾತು ನಾಮಫಲಕದಲ್ಲಿ ಖಾಸಗಿಯವರ ಜಾಹೀರಾತಿನ ಬಗ್ಗೆ ಪ್ರಚಾರ ನಡೆಸಲಾಗುತ್ತಿದ್ದು ಈ ಕುರಿತು ಆಕೆಯ ಗಮನಕ್ಕೆ ತಂದರೆ ಅದನ್ನು ತೆರವುಗೊಳಿಸಿದ್ದಲ್ಲದೆ ಪಕ್ಕದಲ್ಲಿದ್ದ ಇನ್ನೊಂದು ಶಿವಾಜಿ ಜಯಂತಿಯ ಜಾಹಿರಾತನ್ನು ಕೂಡ ತೆರವುಗೊಳಿಸಿ ಬಿಟ್ಟಳು.

ಇಂತಹ ವಿಷಯದಲ್ಲಿ ಎಡವತನ ತೋರಿಸುವ ಈಕೆ ದುಡ್ಡು ದೋಚುವುದರಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ. JJM ನ ಹರ್ ಘರ್ ಜಲ್ ಕಾಮಗಾರಿ ಮುಗಿದು ಅದೆಷ್ಟೋ ದಿನಗಳು ಕಳೆದರೂ ಇದುವರೆಗೂ ಒಂದು ತೊಟ್ಟು ನೀರಿಲ್ಲ. ಸದರಿ ಕಾಮಗಾರಿ ಅಡಿಯಲ್ಲಿ ಇವರು ಕೈಯಾಡಿಸಿದ ರೀತಿ ಹೇಗಿದೆ ಎಂದರೆ ಆ ಯೋಜನೆ ಅಡಿ ಬಳಸುವ HDPE ಪೈಪ್ಗಳನ್ನು ಪೂರಾ ಕಾಮಗಾರಿಯಲ್ಲಿ ಬಳಸದೆ ಅಲ್ಲಲ್ಲಿ ಹಳೆಯ ಗ್ರಾಮ ಪಂಚಾಯಿತಿ ಪೈಪ್ಗಳಿಗೇ ಸಂಪರ್ಕ ನೀಡಿ ಜಾಣ್ಮೆ ಮೆರೆದಿದ್ದಾರೆ. ತೆರಿಗೆ ಹಣದ ದುರುಪಯೋಗವಂತು ಹೇಳತೀರದು. ಆ ಹಣವನ್ನು ಸರ್ಕಾರದ ಮಾರ್ಗಸೂಚಿ ಪ್ರಕಾರ ವ್ಯಯ ಮಾಡದೆ ಇವರಿಗಿಷ್ಟ ಬಂದ ರೀತಿ ಬಳಸಿಕೊಂಡಿರುವುದು ಕೇಳಿ ಬರುತ್ತೆ. ಕಳೆದ ಎರಡು ವರ್ಷಗಳಿಂದ 14 ಗ್ರಾಮಗಳಲ್ಲೂ ಚರಂಡಿಯ ಸ್ವಚ್ಛತೆ ಮಾಡಿರುವುದಿಲ್ಲ ಕೇಳಿದರೆ 15ನೇ ಹಣಕಾಸು ಯೋಜನೆಯತ್ತ ಬೊಟ್ಟು ಮಾಡುತ್ತಾರೆ. ಮೊನ್ನೆ ನಡೆದ ನಿವೇಶನ ಹಂಚಿಕೆಯ ಪ್ರಕ್ರಿಯೆಯಂತೂ ತುಂಬವೇ ಘೋರ. ಏಕೆಂದರೆ ಅಲ್ಲಿನ ತೊಂಡೆಬಾವಿ ಗ್ರಾಮ ಮತ್ತು ರೈಲ್ವೆ ನಿಲ್ದಾಣ ಎರಡು ಗ್ರಾಮಗಳನ್ನು ಬಿಟ್ಟರೆ ಮಿಕ್ಕ 12 ಗ್ರಾಮಗಳಿಂದ ಫಲಾನುಭವಿಗಳು ಕಂಡುಬರುವುದಿಲ್ಲ. ಹೀಗೆ ಈ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅಕ್ರಮಗಳು, ಪ್ರಸ್ತುತ ನಡೆಯುತ್ತಿರುವ ಅನಾಚಾರಗಳು ಒಂದೊಂದಲ್ಲ. ನೀವೇ ಊಹಿಸಿಕೊಳ್ಳಿ ಇಡೀ ತಾಲೂಕಿನಲ್ಲೇ ಒಂದು ಕೋಟಿ ಮೇಲ್ಪಟ್ಟು ವಾರ್ಷಿಕ ಆದಾಯ ಇರುವ ಒಂದು ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿಯನ್ನಾಗಿ ಮಾಡುವುದು ಕಷ್ಟವೇ?

ಪಿಡಿಓ ಪೃಥ್ವಿ ಭಾ

ಪ್ರಿಯ ಓದುಗರೇ, ಪ್ರಸ್ತುತ ಅಲ್ಲಿ ನಡೆಯುತ್ತಿರುವ ಅಕ್ರಮ ಅನಾಚಾರಗಳ ಬಗ್ಗೆ ಬರೆದರೆ ಒಂದೊಂದು ಸಂಚಿಕೆಯು ಮೂರ್ನಾಲ್ಕು ಪುಟಗಳನ್ನು ಮೀರುತ್ತದೆ. ಹಾಗೇ ಪ್ರಸ್ತುತ ಈ ಪಂಚಾಯಿತಿಯ ಆಡಳಿತ ಅಧಿಕಾರಿಗಳು ನಮ್ಮ EO ಸಾಹೇಬರಾದ ಹೊನ್ನಯ್ಯನವರೇ ಆಗಿರುತ್ತಾರೆ ‘ನೋಡಿ ಸ್ವಾಮಿ ನಿಮ್ಮ ಪಂಚಾಯತಿಯಿಂದ ಯಾವುದೇ ಮಾಹಿತಿ ನೀಡುತ್ತಿಲ್ಲ ಸ್ವಲ್ಪ ವಿಚಾರಿಸಿ’ ಅಂತ ಹೇಳಿದರೆ ಅವರಿಗೆ ನೋಟಿಸ್ ಮಾಡುತ್ತೇನೆ ಪ್ರಕರಣ ನಡೆಸಲು ಹೇಳುತ್ತೇನೆ ಮಾಹಿತಿ ಕೊಡಿಸುತ್ತೇನೆ ಎಂದು ಹೇಳಿದವರು ಮತ್ತೆ ಅದರ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ಅಥವಾ ಪ್ರತ್ಯುತ್ತರ

ಇಲ್ಲ. ಇನ್ನು ಹೇಳಿ ಕೇಳಿ ಇದು ಮಳೆಗಾಲ ಒಮ್ಮೆ ಈ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳನ್ನು ನೋಡಿಕೊಂಡು ಬಂದರೆ ಚರಂಡಿಗಳು ಕಟ್ಟಿಕೊಂಡು ಗಬ್ಬುನಾರಿ ರಸ್ತೆಗಳು ಹಾಳಾಗಿ ಅದ್ವಾನವಾಗಿವೆ. ಇನ್ನೇನು ರೋಗಗಳು ಹರಡಿ ಒಂದಷ್ಟು ಮಂದಿ ಆಸ್ಪತ್ರೆ ಸೇರಬೇಕು ಇಲ್ಲ ಒಂದೆರಡು ಶವಗಳು ಬಿದ್ದು ಸ್ಮಶಾನ ಸೇರಬೇಕು ಅದುವರೆಗೂ ಯಾವುದೋ ಒಂದು ಲೆಕ್ಕದ ಹಣ ಆಚೆ ಬಂದು ಚರಂಡಿಗಳು ಸ್ವಚ್ಛತೆ ಕಾಣುವುದಿಲ್ಲ. ಹಾಗೇ ಇತ್ತೀಚಿಗೆ ಇವರ ಪಂಚಾಯ್ತಿ ಕಛೇರಿ ಪಕ್ಕದಲ್ಲಿ ನಡೆದ ನದಿಯಲ್ಲಿ ಮರಳು ದಂಧೆ ಇವರ ಕಣ್ಣಿಗೆ ಕಾಣದೇ ಇದ್ದದ್ದು ವಿಪರ್ಯಾಸವೇ ಸರಿ. ದೊಡ್ಡ ದೊಡ್ಡ ಜನ ಪ್ರತಿನಿಧಿಗಳ ಖಾತೆಗಳು, ಅವರ ರೆಸಾರ್ಟ್, ಫಾರ್ಮ್ ಹೌಸ್ ಗಳ ಮುಂದೆ ಸಾರ್ವಜನಿಕ ಕಾಮಗಾರಿ ಗಳನ್ನು ನಡೆಸಿ ಅವರಿಗೆ ಅನುಕೂಲ ಮಾಡಿಕೊಡುವುದು, ಉಳ್ಳವರ ಕೆಲಸಗಳಷ್ಟೇ ನಡೆಯೋದು ಬಿಟ್ಟರೆ ಜನಸಾಮಾನ್ಯರ ಕೆಲಸಗಳಂತೂ ಮಾರೀಚಿಕೆಯೇ ಸರಿ. ಮುಖ್ಯವಾಗಿ ದಲಿತ ಕೇರಿಗಳ ಪಾಡು ನಾಯಿಗಳ ಪಾಡಿಗಿಂತ ಕಡೆಯಾಗಿದೆ. ಇವಿಷ್ಟು ಈ ಪಂಚಾಯಿತಿಯ ಅರ್ಧ ಹೈಲೈಟ್ಸ್ ಮಾತ್ರ ಆಗಿದ್ದು, ಒಂದೇ ಒಂದು ಲೇಟೆಸ್ಟ್ ಪ್ರಶ್ನೆ ಇದೆ ಏನಪ್ಪಾ ಅಂದ್ರೆ ಇತ್ತೀಚಿಗೆ ಇಲ್ಲಿನ ACC ಸಿಮೆಂಟ್ ಫ್ಯಾಕ್ಟರಿಯ ‘ಸಾರ್ವಜನಿಕ ಆಲಿಕೆ ಸಭೆ’ ಮುಂದೂಡಿದ ದಿನ ರಾತ್ರಿ ಏಳೆಂಟು ಗಂಟೆಯಾದರೂ ಒಂದಷ್ಟು ಮಂದಿ ಸೇರಿ ಗುಪ್ತ ಸಭೆ ನಡೆಸಿದ್ದಾರೆ ಅದೇನೆಂದು ತಿಳಿದು ಬರಬೇಕಿದೆ. ಆದರೆ ಪರಿಸ್ಥಿತಿ ಹೀಗಿರುವಾಗ ಇಷ್ಟೆಲ್ಲಾ ಅಕ್ರಮ, ಅನಾಹುತಗಳು ನಡೆಯುತ್ತಿರುವಾಗ ಸಂಭಂದಪಟ್ಟ ನಮ್ಮ EO ಸಾಹೇಬರು ಏನು ಮಾಡ್ತಿದಾರೆ? ನೋಡೋಣ ಬನ್ನಿ.

ಹೀಗೆ ಕೆಲವು ಪಂಚಾಯತಿಗಳಲ್ಲಿ ಈ ರೀತಿಯ ಅಕ್ರಮಗಳು ನಡೆಯುತ್ತಿರುವುದು ನಮ್ಮ EO ಸಾಹೇಬರ ಗಮನಕ್ಕೆ ಇಲ್ಲವೇ ಎಂದರೆ ಸುಳ್ಳಾದೀತು.ಏಕೆಂದರೆ ಇವೆಲ್ಲವೂ ಅವರ ಗಮನಕ್ಕೆ ಪೂರ್ತಿಯಾಗಿ ಹೊಕ್ಕಿದ್ದು ಇಂತಹ ಇನ್ನಷ್ಟು ಅಕ್ರಮಗಳು ನಡೆದಷ್ಟೂ ಅವರಿಗೆ ಆದಾಯ ಮೂಲವೇ ಆಗುತ್ತೆ. ಹೌದು ಅವರ ಭ್ರಷ್ಟಾಚಾರ ಒಂದೆರಡು ಅಲ್ಲ ಪಂಚಾಯಿತಿ ವ್ಯಾಪ್ತಿಗಳಲ್ಲಿ ಲೇಔಟ್ ಗಳು ಮಾಡಬೇಕೆಂದರೆ ಎಕರೆಗೆ 50,000 ಫಿಕ್ಸ್. ಜಾರಿಯಾಗುವ ಎಲ್ಲಾ ಯೋಜನೆಗಳಲ್ಲೂ ಪರ್ಸೆಂಟೇಜ್ ಫಿಕ್ಸ್. ಇವಿಷ್ಟೇ ಅಲ್ಲ ಕೆಲವು ಪಿಡಿಒಗಳಿಗೆ ಸ್ಥಳ ಬದಲಾವಣೆಗಾಗಲಿ, ಸೆಕ್ರೆಟರಿಗಳಿಗೆ ಪಿಡಿಒ ವರ್ಗ ನೀಡುವುದಕ್ಕಾಗಲಿ ಪಂಚಾಯಿತಿಗೆ ತಕ್ಕ ಹಾಗೆ ಕಾಣಿಕೆ ನೀಡಲೇಬೇಕು. ಹೀಗೆ ಈ ಮನುಷ್ಯನ ಈ ಭ್ರಷ್ಟಾಚಾರ ಕುರಿತು ಕೆಲವು ಪಿಡಿಒಗಳೆ ಅಲವತ್ತುಕೊಂಡಿದ್ದು ಉಂಟು. ಅರೆ ಒಬ್ಬ ಭ್ರಷ್ಟ pdo ಬಗ್ಗೆ ಸಾಕ್ಷಿ ಸಮೇತ ದೂರು ನೀಡಿದರೂ ಕೊಟ್ಟ ದೂರನ್ನು ಅಂಡಿನ ಕೆಳಗೆ ಹಾಕಿಕೊಂಡು ಕೂತುಬಿಟ್ಟಿದಾರೆ ಅಂದರೆ ಇಬ್ಬರ ಮಧ್ಯೆ ಇರುವ ಮುಲಾಜು ಎಂತದೋ ಯೋಚಿಸಿ. ಇವರ ಉದಾಸೀನತೆಗೆ ಕೈಗನ್ನಡಿಯೆಂದರೆ ಇವರಿಗೆ ಸರ್ಕಾರ ನೀಡಿರುವ ಮೊಬೈಲ್ ಸಂಖ್ಯೆ almost ನಾಟ್ ರಿಚೆಬಲ್ ಮತ್ತು ಸುಮಾರು ಬಾರಿ ಸ್ವೀಚಡ್ ಆಫ್. ಒಬ್ಬ ತಾಲೂಕು ಮಟ್ಟದ ಅಧಿಕಾರಿ ಸರ್ಕಾರಿ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಮಾಡಿಕೊಂಡರೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕೋ ಸಂಭಂದಪಟ್ಟವರೇ ಕೈಗೊಂಡು ಇವರ ಉದಾಸೀನತೆಗೆ ಕಡಿವಾಣ ಹಾಕಬೇಕೆಂದು ವಿಜ್ಞಪ್ತಿ. ಹಾಗೇ ಆಗಾಗ ಕೆಲ pdo ಗಳ ಜೊತೆ ತಮ್ಮ ವಸತಿ ಗೃಹದಲ್ಲಿ ಆಗಾಗ EO ಸಾಹೇಬರ ಗುಪ್ತ ಸಭೆ ನಡೆದು ಬರುತ್ತಿದೆ ಎಲ್ಲಾ ಸೇರಿ ಹಾಕುವ ಸ್ಕೆಚ್ ಎಂತದೋ ತಿಳಿದು ಬರಬೇಕಿದೆ.
ಇವೆಲ್ಲ ಪಕ್ಕಕ್ಕಿಟ್ಟರೆ ಈಗಾಗಲೇ ಬಂದಿರುವ ನೂತನ ಶಾಸಕರು ಮತ್ತು ಅವರ ಬೆಂಬಲಿಗರು ಕೆಲವರು ಇಡೀ ತಾಲೂಕನ್ನೇ ರಿಯಲ್ ಎಸ್ಟೇಟ್ ದಂಧೆಯನ್ನಾಗಿ ಮಾರ್ಪಡಿಸಿಕೊಂಡು ಎಲ್ಲಂದರಲ್ಲಿ ಸಿಕ್ಕಿದ್ದು ಬಾಚಿಕೊಂಡು ಶ್ರೀಮಂತರಾಗುತ್ತಿದ್ದಾರೆ. ಇವರ ಕಥೆ ಎಕ್ಕುಟ್ಟಿ ಹೋಗಲಿ ಅತ್ತ. ಆದರೆ ಗ್ರಾಮಗಳಲ್ಲಿನ ಶ್ರೀಸಾಮಾನ್ಯ, ಸಾರ್ವಜನಿಕರು ಮೂಲಭೂತ ಸೌಕರ್ಯಗಳಿಲ್ಲದೆ ಪಡಿ ಪಾಠಲು ಪಡುತ್ತಿದ್ದಾರೆ. ಈ ಕುರಿತು ಪ್ರಸ್ತುತ ನಿಷ್ಠಾವಂತ ಮತ್ತು ಕೆಚ್ಚೆದೆಯ ಅಧಿಕಾರಿಗಳಾಗಿರುವ ನಮ್ಮ CEO ಡಾ.ನವೀನ್ ಭಟ್ ರವರು ಪ್ರಸ್ತುತ ಇವರಿಬ್ಬರ ಮೇಲೆ ಸೂಕ್ತ ತನಿಖೆಗೆ ಆದೇಶ ನೀಡಿ ಇವರ ಎಡೆಮುರಿ ಕಟ್ಟಲಿಲ್ಲವೆಂದರೆ ಗಾಂಧೀಜಿ ಕನಸು ಕಮರಿ ಹೋದಂತೆಯೇ ಸರಿ.
(ಈ ಸುದ್ದಿಯಿಂದ ಎಚ್ಚೆತ್ತುಕೊಳ್ಳದಿದ್ದಲ್ಲಿ ಇನ್ನಷ್ಟು ಪಂಚಾಯ್ತಿಗಳ ಅಧ್ವಾನ ಮುಂದೊಮ್ಮೆ ಸುದ್ದಿ ಬರಲಿದೆ )

Leave a Reply

Your email address will not be published. Required fields are marked *

error: Content is protected !!