ಬೆಂಗಳೂರಿನಲ್ಲಿ ಕಾನೂನು ರಕ್ಷಕನೇ ಭಕ್ಷಕನಾದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸಿಐಡಿ ವಿಭಾಗದ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಎಂಬಾತನೇ ಗ್ಯಾಂಗ್ ಕಟ್ಟಿಕೊಂಡು ಕೇರಳ ಮೂಲದ ಉದ್ಯಮಿಗಳನ್ನು ಹೆದರಿಸಿ 20 ಲಕ್ಷ ರೂಪಾಯಿ ಲೂಟಿ ಮಾಡಿದ್ದಾನೆ. ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ದರೋಡೆಗೆ ಇಲಾಖೆಯ ಅಧಿಕೃತ ಸಿಐಡಿ ಜೀಪನ್ನೇ ಬಳಸಿರುವುದು ಸದ್ಯ ತೀವ್ರ ಸಂಚಲನ ಮೂಡಿಸಿದೆ.
ದರೋಡೆ ನಡೆದಿದ್ದು ಹೇಗೆ?
ವ್ಯಾಪಾರ ಮತ್ತು ಟ್ರೇಡಿಂಗ್ ಉದ್ದೇಶಗಳಿಗಾಗಿ ಕೇರಳದ ಉದ್ಯಮಿಗಳು ದೊಡ್ಡ ಮೊತ್ತದ ನಗದಿನೊಂದಿಗೆ ಬೆಂಗಳೂರಿಗೆ ಬಂದು, ಮಡಿವಾಳದ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದರು. ಉದ್ಯಮಿಗಳ ಬಳಿ ಹಣವಿರುವ ಖಚಿತ ಮಾಹಿತಿ ಪಡೆದ ಸಿಐಡಿ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ, ಸುಲಿಗೆ ಮಾಡಲು ಸ್ಕೆಚ್ ಹಾಕಿದ್ದ. ಇದಕ್ಕಾಗಿ ಹ್ಯಾರಿಸ್, ಕುಪೇಂದ್ರ, ಶಪಿ ಮತ್ತು ಶಾನಿ ಎಂಬ ನಾಲ್ವರೊಂದಿಗೆ ಸೇರಿ ದರೋಡೆಗೆ ಸಂಚು ರೂಪಿಸಿದ್ದ.
ಸ್ಕೆಚ್ ಹೀಗಿತ್ತು: ದಾಳಿಯ ದಿನ ಇನ್ಸ್ಪೆಕ್ಟರ್ ಮಹೇಶ್ ನೇತೃತ್ವದ ತಂಡವು ಹೋಟೆಲ್ ಮುಂಭಾಗದಲ್ಲಿ ಅಧಿಕೃತ ಸಿಐಡಿ ಜೀಪನ್ನು ತಂದು ನಿಲ್ಲಿಸಿತ್ತು. ಇನ್ಸ್ಪೆಕ್ಟರ್ ಜೀಪ್ ಒಳಗಡೆ ಕಾಯುತ್ತಿದ್ದರೆ, ಗ್ಯಾಂಗ್ನ ಇಬ್ಬರು ಸದಸ್ಯರು ಹೋಟೆಲ್ ಕೋಣೆಯೊಳಗೆ ನುಗ್ಗಿದ್ದಾರೆ.
ಬ್ಲ್ಯಾಕ್ಮೇಲ್: ತಾವು ಕ್ರೈಮ್ ವಿಭಾಗದ ಪೊಲೀಸರೆಂದು ನಕಲಿ ಗುರುತಿನ ಚೀಟಿ ತೋರಿಸಿದ ಆರೋಪಿಗಳು, “ನೀವು ಅಕ್ರಮವಾಗಿ ಟ್ರೇಡಿಂಗ್ ಮಾಡಲು ಹಣ ತಂದಿದ್ದೀರಿ” ಎಂದು ಉದ್ಯಮಿಗಳನ್ನು ಹೆದರಿಸಿದ್ದಾರೆ. ಬಳಿಕ ಅವರಿಂದ 20 ಲಕ್ಷ ರೂಪಾಯಿ ಹಣವನ್ನು ದೋಚಿ, ಹೊರಗೆ ಕಾಯುತ್ತಿದ್ದ ಸಿಐಡಿ ಜೀಪ್ ಹತ್ತಿ ಪರಾರಿಯಾಗಿದ್ದಾರೆ.

ಸಿಸಿಟಿವಿ ದೃಶ್ಯದಿಂದ ಬಯಲಾದ ಸತ್ಯ
ತಾವು ವಂಚನೆಗೆ ಒಳಗಾಗಿರುವುದು ತಡವಾಗಿ ಬೆಳಕಿಗೆ ಬರುತ್ತಿದ್ದಂತೆ ಉದ್ಯಮಿಗಳು ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಹೋಟೆಲ್ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ದರೋಡೆಗೆ ಇಲಾಖೆಯ ಜೀಪ್ ಬಳಸಿರುವುದು ಪತ್ತೆಯಾಗಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರು ಗ್ಯಾಂಗ್ ಸದಸ್ಯ ಕುಪೇಂದ್ರ ಎಂಬಾತನನ್ನು ಬಂಧಿಸಿದ್ದಾರೆ. ಆತನನ್ನು ವಿಚಾರಣೆಗೆ ಒಳಪಡಿಸಿದಾಗ, ಇಡೀ ದರೋಡೆಯ ಮಾಸ್ಟರ್ ಮೈಂಡ್ ಸ್ವತಃ ಸಿಐಡಿ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಎಂಬ ಆಘಾತಕಾರಿ ಸತ್ಯ ಬಯಲಾಗಿದೆ.
ಸಹಚರ ಸಿಕ್ಕಿಬೀಳುತ್ತಿದ್ದಂತೆ ಇನ್ಸ್ಪೆಕ್ಟರ್ ಮಹೇಶ್ ಕನಕಗಿರಿ ಸೇರಿದಂತೆ ಉಳಿದ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪೊಲೀಸರು ದರೋಡೆಗೆ ಬಳಸಿದ್ದ ಸಿಐಡಿ ಜೀಪನ್ನು ಜಪ್ತಿ ಮಾಡಿದ್ದು, ತಲೆಮರೆಸಿಕೊಂಡಿರುವ ಪೊಲೀಸ್ ಅಧಿಕಾರಿ ಮತ್ತು ಆತನ ಇತರೆ ಸಹಚರರ ಪತ್ತೆಗಾಗಿ ವ್ಯಾಪಕ ಜಾಲ ಬೀಸಿದ್ದಾರೆ.

