ಸಕಲೇಶಪುರ ನಗರದ ಮಹೇಶ್ವರಿ ನಗರದಲ್ಲಿ ಕಳೆದ ಕೆಲವು ದಿನಗಳಿಂದ ಅತಂತ್ರ ಸ್ಥಿತಿಯಲ್ಲಿ ರಸ್ತೆ ಬದಿಯೇ ವಾಸವಾಗಿದ್ದ 65 ವರ್ಷದ ವೃದ್ಧೆ ನಂಜಮ್ಮ ಅವರಿಗೆ ಸಾಮಾಜಿಕ ಕಾರ್ಯಕರ್ತ ಸೈಯದ್ ಇದ್ರೀಸ್ ಅವರು ಆಸರೆಯಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವಯೋವೃದ್ಧ ಮಹಿಳೆಯೊಬ್ಬರು ರಸ್ತೆ ಬದಿಯಲ್ಲಿ ಸಂಕಷ್ಟಕರ ಪರಿಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ ಎಂಬ ಮಾಹಿತಿಯನ್ನು ಸ್ಥಳೀಯರಾದ ಪ್ರೇಮ ಅವರು ದೂರವಾಣಿ ಮೂಲಕ ಸೈಯದ್ ಇದ್ರೀಸ್ ಅವರ ಗಮನಕ್ಕೆ ತಂದಿದ್ದರು. ವಿಷಯ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಇದ್ರೀಸ್, ತಮ್ಮ ಸ್ನೇಹಿತ ಹಾಗೂ ಫಾತಿಮಾ ಮಸ್ಜಿದ್ ಅಧ್ಯಕ್ಷರಾದ ಇಮ್ರಾನ್ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳೀಯರ ಸಹಕಾರದೊಂದಿಗೆ ಅಜ್ಜಿಯ ಆರೋಗ್ಯ ಮತ್ತು ಹಿನ್ನೆಲೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ ತಂಡ, ಅವರಿಗೆ ಸೂಕ್ತ ಆಶ್ರಯ ಕಲ್ಪಿಸಲು ಮುಂದಾಯಿತು.
ನಂತರ ನಗರ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಅಗತ್ಯ ಕಾನೂನು ಪ್ರಕ್ರಿಯೆ ಹಾಗೂ ಅನುಮತಿಯನ್ನು ಪಡೆದುಕೊಂಡರು. ಬಳಿಕ ನಂಜಮ್ಮ ಅವರನ್ನು ಸುರಕ್ಷಿತವಾಗಿ ಹಾಸನದಲ್ಲಿರುವ ತೇಜೋದಯ ಆಶ್ರಮಕ್ಕೆ ದಾಖಲಿಸಿ, ಅವರಿಗೆ ಸುಸಜ್ಜಿತ ವಸತಿ ಹಾಗೂ ಆರೈಕೆಗೆ ವ್ಯವಸ್ಥೆ ಮಾಡಲಾಯಿತು.
ನಿರ್ಗತಿಕ ಸ್ಥಿತಿಯಲ್ಲಿದ್ದ ವೃದ್ಧೆಗೆ ತುರ್ತಾಗಿ ಸ್ಪಂದಿಸಿ ಆಸರೆ ನೀಡಿದ ಸೈಯದ್ ಇದ್ರೀಸ್ ಹಾಗೂ ಅವರ ತಂಡದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಪ್ರೇಮ, ಇಮ್ರಾನ್, ತಾಸಿನ್, ತಬ್ರೇಜ್, ಮೋಹನ್ ಸೇರಿದಂತೆ ಹಲವು ಸ್ಥಳೀಯರು ಉಪಸ್ಥಿತರಿದ್ದು ಸಹಕರಿಸಿದರು.

