”ಇಂದೇ ಪೇಪರ್ನಲ್ಲಿ ಬರೆದಿಟ್ಟುಕೊಳ್ಳಿ, 2028ರಲ್ಲೂ ಇದೇ ಡಿಕೆ ಶಿವಕುಮಾರ್ ಇರುತ್ತಾರೆ, ಇದೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ!”—ಹೀಗೆಂದು ಭವಿಷ್ಯ ನುಡಿಯುವ ಮೂಲಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ಗೆ ನೇರ ಸವಾಲು ಹಾಕಿದ್ದಾರೆ.
ರಾಜ್ಯ ಬಿಜೆಪಿಯು ಮುಂದಿನ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬೆನ್ನಲ್ಲೇ, ಇತ್ತ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಎಂ, ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಹಿಡಿಯುವುದು ಸೂರ್ಯ-ಚಂದ್ರರಷ್ಟೇ ಸತ್ಯ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಅಂದು 136, ಇಂದು 2028ರ ಭವಿಷ್ಯ!
ಕಳೆದ 2023ರ ವಿಧಾನಸಭಾ ಚುನಾವಣೆಯ ಸಂದರ್ಭವನ್ನು ನೆನಪಿಸಿಕೊಂಡ ಡಿಕೆಶಿ, “ಅಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಬಿಜೆಪಿಗೆ 122 ಸೀಟುಗಳು ಬರುತ್ತವೆ ಎಂದಿದ್ದರು. ಆದರೆ ನಾನು ಸವಾಲು ಹಾಕಿ 136 ಸೀಟುಗಳೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದಿದ್ದೆ. ನನ್ನ ಆ ಮಾತು ನಿಜವಾಗಿತ್ತು. ಈಗಲೂ ಅಷ್ಟೇ ಖಡಕ್ ಆಗಿ ಹೇಳ್ತಾ ಇದ್ದೇನೆ, ಮುಂದಿನ ಬಾರಿಯೂ ನಮ್ಮದೇ ಸರ್ಕಾರ ಬರುತ್ತದೆ” ಎಂದು ಸಿಂಹಗರ್ಜನೆ ಮಾಡಿದರು.
ಸಿಎಂ ಸ್ಥಾನದ ಪ್ರಶ್ನೆಗೆ ‘ಮೌನಂ ಶರಣಂ’!
ಮುಂದಿನ ಬಾರಿ ಕಾಂಗ್ರೆಸ್ ಸರ್ಕಾರ ಬರುವುದು ಗ್ಯಾರಂಟಿ ಎಂದ ಡಿಕೆ ಶಿವಕುಮಾರ್ ಅವರಿಗೆ, “ಹಾಗಾದರೆ ಮುಂದಿನ ಮುಖ್ಯಮಂತ್ರಿ ಯಾರು? ನೀವೇ ಸಿಎಂ ಆಗ್ತೀರಾ?” ಎಂಬ ಪ್ರಶ್ನೆ ಎದುರಾಯಿತು. ಈ ಪ್ರಶ್ನೆಗೆ ನೇರ ಉತ್ತರ ನೀಡದ ಡಿಸಿಎಂ, ಕೇವಲ ಮುಗುಳ್ನಕ್ಕು ಮೌನ ವಹಿಸುವ ಮೂಲಕ ಕುತೂಹಲವನ್ನು ಹಾಗೇ ಉಳಿಸಿಕೊಂಡರು.
ಕೇಂದ್ರದ ವಿರುದ್ಧ ಸಮರ: ಮೇ 30ಕ್ಕೆ ಪ್ರತಿಭಟನೆ
ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಕುಮಾರ್, ಬೆಲೆ ಏರಿಕೆಯನ್ನು ಖಂಡಿಸಿ ಮೇ 30ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಪ್ರಕಟಿಸಿದರು. ಇದೇ ವೇಳೆ ದೆಹಲಿ ಪ್ರವಾಸದ ಕುರಿತು ಕೇಳಿದ ಪ್ರಶ್ನೆಗೆ, “ಹೈಕಮಾಂಡ್ ನಾಯಕರು ಕರೆದರೆ ಮಾತ್ರ ದೆಹಲಿಗೆ ಹೋಗುತ್ತೇನೆ” ಎಂದು ಸ್ಪಷ್ಟಪಡಿಸಿದರು.
ಅಂದು ಅಮಿತ್ ಶಾಗೆ ಟಕ್ಕರ್ ಕೊಟ್ಟಿದ್ದ ‘ಬಂಡೆ’, ಇಂದು 2028ರ ಚುನಾವಣೆಗೆ ಈಗಲೇ ರಣಕಹಳೆ ಊದಿದ್ದಾರೆ. ಡಿಕೆಶಿ ಭವಿಷ್ಯದ ಹಿಂದೆ ಯಾವ ‘ಮಾಸ್ಟರ್ ಪ್ಲಾನ್’ ಅಡಗಿದೆ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ!

