Headlines

ರೌಡಿಸಂಗೆ ಬ್ರೇಕ್ ಹಾಕಲು ಖಾಕಿ ಸಜ್ಜು:ಎಸ್‌ಪಿ ಮುತ್ತುರಾಜು ಆದೇಶದ ಬೆನ್ನಲ್ಲೇ ‘ರೌಡಿ ನಿಗ್ರಹ ದಳ’ ರಚನೆ!

ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ

ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುತ್ತಿದ್ದ ರೌಡಿಗಳ ಹೆಡೆಮುರಿ ಕಟ್ಟಲು ಚಾಮರಾಜನಗರ ಜಿಲ್ಲೆಯ 4 ವೃತ್ತ ಹಾಗೂ 7 ಕಾನೂನು ಸುವ್ಯವಸ್ಥೆ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಿಶೇಷ “ರೌಡಿ ನಿಗ್ರಹ ದಳ” ಅನ್ನು ರಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಶ್ರೀ ಮುತ್ತುರಾಜು ಎಂ., ಐಪಿಎಸ್ ಅವರ ಆದೇಶದ ಮೇರೆಗೆ ಈ ಕಡಕ್ ಕ್ರಮ ಕೈಗೊಳ್ಳಲಾಗಿದ್ದು, ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವುದು ಮತ್ತು ನಾಗರಿಕರ ಹಕ್ಕುಗಳನ್ನು ರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರಾಜ್ಯಾದ್ಯಂತ ರೌಡಿಸಂ ಹತ್ತಿಕ್ಕಲು ಮಾನ್ಯ ಮುಖ್ಯಮಂತ್ರಿಗಳು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ನೀಡಿದ ಕಟ್ಟುನಿಟ್ಟಿನ ನಿರ್ದೇಶನದ ಬೆನ್ನಲ್ಲೇ ಈ ವಿಶೇಷ ದಳ ಅಸ್ತಿತ್ವಕ್ಕೆ ಬಂದಿದೆ.

ಈ ನೂತನ ರೌಡಿ ನಿಗ್ರಹ ದಳಕ್ಕೆ ಅಪರಾಧ ಜಗತ್ತನ್ನು ಬೇರುಸಹಿತ ಕಿತ್ತೆಸೆಯಲು ಮುಕ್ತ ಅಧಿಕಾರ ನೀಡಲಾಗಿದೆ. ಹಳೇ ರೌಡಿ ಶೀಟರ್‌ಗಳ ಮೇಲೆ ಸದಾ ಕಣ್ಣಿಡುವುದು, ಹೊಸ ರೌಡಿಗಳು, ಗ್ಯಾಂಗ್‌ಗಳು ಮತ್ತು ಅಪರಾಧ ಗುಂಪುಗಳನ್ನು ಪತ್ತೆಹಚ್ಚಿ ಗುಪ್ತಚರ ಮಾಹಿತಿ ಸಂಗ್ರಹಿಸುವುದು ಇದರ ಪ್ರಮುಖ ಕೆಲಸವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪದೇ ಪದೇ ಅಶಾಂತಿ ಮೂಡಿಸುವ ಕಿಡಿಗೇಡಿಗಳ ಮೇಲೆ ನಿಗಾ ಇಡಲಾಗುತ್ತಿದ್ದು, ಮುನ್ನೆಚ್ಚರಿಕೆ ಬಂಧನ ಸೇರಿದಂತೆ ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಹಾಗೂ ಕೋಕಾ (KOKA) ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಅಲ್ಲದೆ, ಬೀಟ್ ಸಿಬ್ಬಂದಿ ಮತ್ತು ಸ್ಥಳೀಯ ಗುಪ್ತಚರ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದುಕೊಂಡು, ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ಯಾವುದೇ ರೀತಿಯ ಬೆದರಿಕೆ, ಬಲವಂತದ ಹಣ ವಸೂಲಿ ಅಥವಾ ಗ್ಯಾಂಗ್ ವಾರ್ ಕಂಡುಬಂದಲ್ಲಿ ತಕ್ಷಣವೇ ಹತ್ತಿಕ್ಕಲು ದಳ ಸಜ್ಜಾಗಿದೆ.


ಈ ವಿಶೇಷ ತಂಡದಲ್ಲಿ ಆಯಾ ವೃತ್ತ ಮತ್ತು ಠಾಣೆಗಳ ವ್ಯಾಪ್ತಿಯ ವೃತ್ತ ನಿರೀಕ್ಷಕರು, ಉಪ-ನಿರೀಕ್ಷಕರು, ಸಹಾಯಕ ಪೊಲೀಸ್ ಉಪ-ನಿರೀಕ್ಷಕರು, ಹೆಡ್ ಕಾನ್ಸ್‌ಟೇಬಲ್ ಹಾಗೂ ಕಾನ್ಸ್‌ಟೇಬಲ್‌ಗಳು ಕಾರ್ಯನಿರ್ವಹಿಸಲಿದ್ದು, ಉಪ ವಿಭಾಗದ ಉಪಾಧೀಕ್ಷಕರು (DySP) ಇದರ ಮೇಲ್ವಿಚಾರಣೆ ನಡೆಸಲಿದ್ದಾರೆ. ಈಗಾಗಲೇ ಅಪರಾಧ ಹಿನ್ನೆಲೆ ಉಳ್ಳವರ ಚಲನವಲನಗಳ ಮೇಲೆ ತೀವ್ರ ನಿಗಾ ಇರಿಸಲಾಗಿದ್ದು, ರೌಡಿ ಚಟುವಟಿಕೆಗಳಲ್ಲಿ ತೊಡಗಿದ್ದವರನ್ನು ಠಾಣೆಗೆ ಕರೆಸಿ ಖಡಕ್ ಎಚ್ಚರಿಕೆ ನೀಡುವ ಪ್ರಕ್ರಿಯೆಯೂ ಆರಂಭವಾಗಿದೆ ಎಂದು ಚಾಮರಾಜನಗರ ಜಿಲ್ಲೆಯ ಪೊಲೀಸ್ ಅಧೀಕ್ಷಕರ ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!