ಮಂಡ್ಯ: ಧರ್ಮಸ್ಥಳದ ಬಗ್ಗೆ ಅಪ ಪ್ರಚಾರ ಮಾಡುತ್ತಿರುವ ಗಿರೀಶ್ ಮಟ್ಟಣ್ಣ, ಮಹೇಶ್ ಶೆಟ್ಟಿ, ತಿಮ್ಮರೊಡಿ, ಸಮೀರ್, ಕಾಂಗ್ರೆಸ್ ಮುಖಂಡರಾದ ರಮ್ಯಾ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರು ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎ.ಈ.ಗಂಗಾಧರಸ್ವಾಮಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಧರ್ಮಸ್ಥಳದಲ್ಲಿ ನೂರಾರು ಮೃತದೇಹಗಳನ್ನು ಹೂಳಿದ್ದೇನೆ, ತನಿಖೆ ನಡೆಸಿ ಎನ್ನುವ ಅನಾಮಿಕ ಕ ವ್ಯಕ್ತಿ ಯಾರು ಎಂಬ ಬಗ್ಗೆ ಯಾರಿಗೂ ಮಾಹಿತಿ ಇಲ್ಲ ನಿರ್ದಿಷ್ಟ ಸ್ಥಳಗಳಲ್ಲಿ ಅನಾಥ ಮೃತದೇಹ ಹೂತಿದ್ದಾಗಿ ಒಂದು ತಿಂಗಳ ಹಿಂದೆ ಹೇಳಿಕೆ ನೀಡಿದ್ದು, ಅದರಂತೆ ಎಸ್‌ಐಟಿ ಮಾರ್ಗದರ್ಶನದಲ್ಲಿ ಹತ್ತಾರು ಕಡೆ ಉತ್ಪನನ ನಡೆಸಿದೆ ಆದರೆ ಆತನ ಆರೋಪದಲ್ಲಿ ಹುರುಳು ಇದ್ದಂತೆ ಕಾಣುತ್ತಿಲ್ಲ ಎಂಬುದನ್ನು ಮಾಧ್ಯಮಗಳು ವರದಿ ಮಾಡಿವೆ ಎಂದು ಆರೋಪಿಸಿದರು.
ಆತ ಯಾವ ಆಧಾರದಲ್ಲಿ ಆರೋಪ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಬೇಕು. ಆತನ ಹಿಂದಿರುವ ಕಾಣದ ಕೈಗಳ ಬಗ್ಗೆ ಕೂಲಂಕುಷ ತನಿಖೆಯಾಗಬೇಕು. ಜೊತೆಗೆ ಗಿರೀಶ್ ಮಟ್ಟಣ್ಣನವರ್, ಮಹೇಶ್ ತಿಮ್ಮರೊಡಿಯನ್ನು ಕೂಲಂಕುಷವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಮೃತದೇಹಗಳನ್ನು ಹೂಳಿದ ವಿಚಾರಕ್ಕೆ ಸಂಬಂಧಿಸಿ ಅನಾಮಿಕನ ದೂರಿನ ಮೇರೆಗೆ ನಡೆಯುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ತನಿಖೆಗೆ ಬಿಜೆಪಿಯ ಸಂಪೂರ್ಣ ಬೆಂಬಲ ಇದೆ. ಆದರೆ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಎಡಪಂಥೀಯರ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ನಡೆಯುತ್ತಿದೆ. ಈ ರೀತಿ ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿರುವ ಸಾಮಾಜಿಕ ಜಾಲತಾಣಗಳಿಗೆ ಕೂಡಲೇ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದರು.
ಧರ್ಮಸ್ಥಳದ ವಿರುದ್ಧ ಆರೋಪ ಬಂದಾಗ ಹಿಂದೆಯೂ ತನಿಖೆಯನ್ನು ಬಿಜೆಪಿ ಬೆಂಬಲಿಸಿತ್ತು. ಈ ಬಾರಿಯೂ ಎಸ್‌ಐಟಿ ತನಿಖೆಗೆ ಬೆಂಬಲ ವ್ಯಕ್ತಪಡಿಸುತ್ತದೆ. ಆದರೆ ಎಸ್‌ಐಟಿ ತನಿಖೆ ವೇಳೆ ಹೊರಗಿನವರು ಕ್ಷೇತ್ರದ ಬಗ್ಗೆ ಅವಹೇಳನ ಮಾಡುವುದನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾಧ್ಯವಿಲ್ಲ. ವಿನಾ ಕಾರಣ ತೇಜೋವಧೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಸ್‌ಐಟಿ ತನಿಖೆ ಸಂದರ್ಭ ನಡೆದಿರುವ ಅಹಿತಕರ ಘಟನೆ ಹಾಗೂ ದೇವಸ್ತಾನದ ಮೇಲೆ ತೇಜೋವಧೆ ಮಾಡುವುದರ ಹಿಂದೆ ಎಡಪಂಥೀಯರ ಷಡ್ಯಂತರ ಕಂಡುಬರುತ್ತಿದೆ. ಎಡಪಂಥೀಯರ ಒತ್ತಾಯದ ಮೇರೆಗೆ ಧರ್ಮಸ್ಥಳ ಗ್ರಾಮದ ಕೇಸನ್ನು ಎಸ್‌ಐಟಿಗೆ ಹಸ್ತಾಂತರಿಸಿದ್ದಾಗಿ ಸಚಿವ ದಿನೇಶ ಗುಂಡೂರಾವ್ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಎಸ್‌ಐಟಿ ತನಿಖೆಗಾಗಿ ತಮಿಳುನಾಡಿನ ಕಾಂಗ್ರೆಸ್ ಸಂಸದರೊಬ್ಬರು ತಮ್ಮ ಪಕ್ಷದ ವರಿಷ್ಠರ ಮೂಲಕ ಒತ್ತಡ ಹಾಕಿರುವ ಸಂಗತಿಗಳು ಕೇಳಿಬರುತ್ತಿದೆ. ಇದೆಲ್ಲವೂ ಹಿಂದುಗಳ ಶ್ರದ್ಧಾಕೇಂದ್ರಗಳನ್ನು ದಮನಿಸುವ ಷಡ್ಯಂತರದ ಭಾಗವೇ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹೇಶ್ ತಿಮ್ಮರೊಡಿ ತಂಡದ ರಾಧಿಕಾ ಎಂಬ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಿಂದುಮುಖಂಡರನ್ನು ಕೇರಳದ ಕಮ್ಮುನಿಸ್ಟ್ ಗ್ಯಾಂಗ್ ಕರೆಸಿ ಕೊಲೆ ಮಾಡುವ ಬಗ್ಗೆ ಮಾತನಾಡಿದ್ದಾಳೆ. ಗಿರೀಶ್ ಮಟ್ಟಣ್ಣ ರವರು ಸಾರ್ವಜನಿಕ ಭಾಷಣದಲ್ಲಿ ಧರ್ಮಸ್ಥಳದಲ್ಲಿ ನಡೆಯುವ ಉಚಿತ ಸರಳವಿವಾಹದ ಬಗ್ಗೆ ತೀರಾ ಅವಹೇಳನಕಾರಿ ಮಾತನಾಡಿದ್ದು ,ಮದುವೆಯಾಗುವ ಹೆಣ್ಣು ಮಕ್ಕಳನ್ನು ಮೊದಲ ರಾತ್ರಿ ನಮ್ಮೊಂದಿಕೆ ಆಗಬೇಕೆಂದು ಕರಾರು ಮಾಡಿಕೊಳ್ಳುತ್ತಾರೆ ಅನ್ನೋ ಮೂಲಕ ಅಲ್ಲಿ ಮದುವೆಯಾದ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಅಪಮಾನ ಮಾಡಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಮುಖಂಡರಾದ ರಮ್ಯಾ ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಧಮಸ್ಥಳದಲ್ಲಿ ನೂರಾರು ಹೆಣ್ಣು ಮಕ್ಕಳ ಹೂತಿಟ್ಟ ಶವಗಳು ಸಿಗುತ್ತಿವೆ ಅನ್ನೋ ಹೇಳಿಕೆ ನೀಡಿದ್ದಾರೆ, ಸಾವಿರಕ್ಕೂ ಹೆಚ್ಚು ಫೇಸ್ ಬುಕ್ , ಟ್ವಿಟ್ಟರ್, ಯುಟ್ಯೂಬ್ ನಿರ್ವಾಹಕರಿಗೆ ಲಕ್ಷಗಟ್ಟಲೆ ಹಣನೀಡಿದ್ದಾರೆ ಅನ್ನೋ ಮಾಹಿತಿ ಇದೆ, ಇದೊಂದು ಪೂರ್ವ ಯೋಜಿತ ಟೂಲ್ ಕಿಟ್ ಅಪ ಪ್ರಚಾರ ತಂಡವಾಗಿದ್ದು, ಡಿಸ್ ಮ್ಯಾಂಟಲಿಂಗ್ ಗ್ಲೋಬಲ್ ಹಿಂದುತ್ವ ಎಂಬ ಶೀರ್ಷಿಕೆಯಡಿ ನಡೆಯುತ್ತಿರುವ ಹಿಂದು ಧರ್ಮದ ವಿರುದ್ಧ ಪಿತೂರಿಯಾಗಿದ್ದು , ಸಂಘಟಿತ ಯೋಜಿತ ಷಡ್ಯಂತ್ರವಾಗಿದೆ ಈ ಹಿನ್ನೆಲೆಯಲ್ಲಿ ಸಮೀರ್, ಗಿರೀಶ್ ಮಟ್ಟಣ್ಣನವರ್, ಮಹೇಶ್ ಶೆಟ್ಟಿ ತಿಮ್ಮರೊಡಿ , ರಮ್ಯಾ ಅವರನ್ನು ಕೂಲಂಕೋಶ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹ ಪಡಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಸಿ.ಟಿ.ಮಂಜುನಾಥ್, ಮುಖಂಡರಾದ ಹೊಸಹಳ್ಳಿ ಶಿವು, ಮಾದರಾಜ ಅರಸ್, ಆನಂದ್, ಚಂದ್ರು, ಗೊರವಾಲೆ ಶಿವಣ್ಣ, ನಾಗಣ್ಣ ಮಲ್ಲಪ್ಪ, ಆನಂದ್ ಭಾಗವಹಿಸಿದ್ದರು.

