ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಮತ್ತೊಂದು ಬೃಹತ್ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ. ರಾಜ್ಯದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ ನಡೆದಿದ್ದು, ಒಂದೊಂದು ಹುದ್ದೆಯನ್ನು ಬರೋಬ್ಬರಿ ₹80 ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪ ವ್ಯಕ್ತವಾಗಿದೆ.
ಹಣಕ್ಕಾಗಿ ಡೀಲ್: ವೈರಲ್ ಆಯ್ತು ವಿಡಿಯೋ!
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಮಧ್ಯವರ್ತಿ ಮೊಹಮ್ಮದ್ ಆರಿಫ್ ಹಾಗೂ ವಿದ್ಯಾರ್ಥಿ ಸಂಘಟನೆಯ ಮುಖಂಡ ಕಾಂತಕುಮಾರ್ ನಡುವಿನ ಫೋನ್ ಸಂಭಾಷಣೆ ಬಯಲಾಗಿದೆ. ಹುದ್ದೆಗಾಗಿ ನೇರವಾಗಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಈ ಸಂಭಾಷಣೆಯಿಂದ ಸ್ಪಷ್ಟವಾಗಿದೆ.
ನೇಮಕಾತಿ ಮತ್ತು ಅಭ್ಯರ್ಥಿಗಳ ಆಕ್ರೋಶ
ಹುದ್ದೆಗಳು: 400 ಪಶುವೈದ್ಯಾಧಿಕಾರಿ ಹುದ್ದೆಗಳು (342 ಸಾಮಾನ್ಯ + 58 ಬ್ಯಾಕ್ ಲಾಗ್)
ಲಿಖಿತ ಪರೀಕ್ಷೆ: ಜನವರಿ 8
ಫಲಿತಾಂಶ: ಜುಲೈ 17
ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ಕಷ್ಟಪಟ್ಟು ಓದಿದ ಅರ್ಹ ಆಕಾಂಕ್ಷಿಗಳು ದಿಗ್ಭ್ರಮೆಗೊಂಡಿದ್ದಾರೆ. ಒಟ್ಟು ನೇಮಕಾತಿ ಪ್ರಕ್ರಿಯೆಯಲ್ಲಿ ಶೇ. 60ಕ್ಕೂ ಹೆಚ್ಚು ಹುದ್ದೆಗಳಲ್ಲಿ ಅಕ್ರಮ ನಡೆದಿದೆ ಎಂದು ಅಭ್ಯರ್ಥಿಗಳು ಆರೋಪಿಸಿದ್ದಾರೆ.
ವಿಧಾನಸೌಧ ಠಾಣೆಗೆ ದೂರು ಸಲ್ಲಿಕೆ ಯತ್ನ
ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಿಂದ ಆಕ್ರೋಶಗೊಂಡ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಪ್ರತಿಭಟನೆ ನಡೆಸಿ, ವಿಧಾನಸೌಧ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು. ಆದರೆ, ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಸೂಚಿಸಿರುವ ಪೊಲೀಸರು, ಪ್ರಸ್ತುತ ಯಾವುದೇ ಅಧಿಕೃತ ದೂರು ದಾಖಲಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಅಭ್ಯರ್ಥಿಗಳ ಗಂಭೀರ ಆರೋಪಗಳು:
ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿದ್ದ ಸುಮಾರು 450 ಅಭ್ಯರ್ಥಿಗಳನ್ನು ಸಂಪರ್ಕಿಸಿದ್ದ ಮಧ್ಯವರ್ತಿಗಳು, ಅಂತಿಮ ಪಟ್ಟಿಯಲ್ಲಿ ಹೆಸರು ಸೇರಿಸಲು ₹70 ರಿಂದ ₹80 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ.
ಕೆಲ ಅಭ್ಯರ್ಥಿಗಳಿಂದ ಈಗಾಗಲೇ ಮುಂಗಡ ಹಣ ಪಡೆಯಲಾಗಿದೆ.
ಅಭ್ಯರ್ಥಿಗಳ ಫೋನ್ ನಂಬರ್‌ಗಳು ಮಧ್ಯವರ್ತಿಗಳಿಗೆ ಸಿಕ್ಕಿರುವುದನ್ನು ನೋಡಿದರೆ ಇದರ ಹಿಂದೆ ಕೆಪಿಎಸ್‌ಸಿ ಅಧಿಕಾರಿಗಳ ಕೈವಾಡವಿರುವುದು ಸ್ಪಷ್ಟ.
ಮಾಜಿ ಅಧ್ಯಕ್ಷರ ಕೈವಾಡದ ಶಂಕೆ
ಕುಟುಂಬದ ಆದಾಯ ಮರೆಮಾಚಿ ಪುತ್ರಿಗೆ ಉದ್ಯೋಗ ಕೊಡಿಸಲು ಯತ್ನಿಸಿದ ಆರೋಪದ ಮೇಲೆ ಇತ್ತೀಚೆಗಷ್ಟೇ ಅಮಾನತುಗೊಂಡಿದ್ದ ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಅವಧಿಯಲ್ಲೇ ಈ ಭ್ರಷ್ಟಾಚಾರ ನಡೆದಿದೆ ಎಂಬ ಗಂಭೀರ ಆರೋಪಗಳೂ ಕೇಳಿಬರುತ್ತಿವೆ.
ಮರು ಪರೀಕ್ಷೆಗೆ ಪಟ್ಟು
”ಹಣವಿದ್ದವರಿಗೆ ಮಾತ್ರ ಸರ್ಕಾರಿ ಕೆಲಸ ಸಿಗುವುದಾದರೆ ನಾವೇಕೆ ಹಗಲಿರುಳು ಕಷ್ಟಪಟ್ಟು ಓದಬೇಕು?” ಎಂದು ಪ್ರಶ್ನಿಸಿರುವ ಅಭ್ಯರ್ಥಿಗಳು, ತಕ್ಷಣವೇ ಈ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ ಸಂಪೂರ್ಣ ಪಾರದರ್ಶಕವಾಗಿ ಮರು ಪರೀಕ್ಷೆ ನಡೆಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

