Headlines

MIMS ಆಸ್ಪತ್ರೆಯಲ್ಲಿ ಮೆಡಿಸಿನ್ ಅಕ್ರಮ ದಂಧೆಯಲ್ಲಿ ಸಿಬ್ಬಂದಿಗಳು ಭಾಗಿ!?

ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ನಡೆದಿರುವ ಘಟನೆಯೊಂದು ಸರ್ಕಾರಿ ಆಸ್ಪತ್ರೆಗಳ ಆಡಳಿತ ವ್ಯವಸ್ಥೆ, ಔಷಧ ವಿತರಣೆ ಹಾಗೂ ಸಿಬ್ಬಂದಿಯ ಕಾರ್ಯವೈಖರಿಯ ಬಗ್ಗೆ ತೀವ್ರ ಅನುಮಾನಗಳನ್ನು ಹುಟ್ಟುಹಾಕಿದೆ.

ಬಡ ಕುಟುಂಬದ ಮಹಿಳೆಯೊಬ್ಬರು ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಸಹಜ ಹೆರಿಗೆ ಸಾಧ್ಯವಾಗದ ಕಾರಣ ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆದರೆ ದುರದೃಷ್ಟವಶಾತ್ ನವಜಾತ ಶಿಶು ಮೃತಪಟ್ಟಿತ್ತು. ಮಾನಸಿಕವಾಗಿ ಕುಗ್ಗಿದ್ದ ಕುಟುಂಬವು ಮಹಿಳೆಯ ಆರೋಗ್ಯ ಚೇತರಿಕೆಯಾಗಲಿ ಎಂಬ ಆಶಯದಿಂದ ಚಿಕಿತ್ಸೆಯನ್ನು ಮುಂದುವರಿಸಿತ್ತು.

ಶಸ್ತ್ರಚಿಕಿತ್ಸೆಯ ಬಳಿಕ ನೀಡಬೇಕಾದ ಸಾಮಾನ್ಯ ನೋವು ನಿವಾರಕ ಹಾಗೂ ಉರಿಯೂತ ನಿಯಂತ್ರಣದ ಔಷಧಿಗಳ ಬದಲಿಗೆ, ಆಸ್ಪತ್ರೆಯ ಸ್ಟಾಫ್ ನರ್ಸ್ ಒಬ್ಬರು ದುಬಾರಿ, ರೋಗನಿರೋಧಕ ಶಕ್ತಿಯಿಂದ ಬರುವ ಥ್ರೊಂಬೊಸೈಟೊಪೀನಿಯಾ (ITP), ತೀವ್ರ ಸ್ವರೂಪದ ಅಪ್ಲಾಸ್ಟಿಕ್ ಅನೀಮಿಯಾ, ಮತ್ತು ಹೆಪಟೈಟಿಸ್ C-ಸಂಬಂಧಿತ ರಕ್ತದ ಪ್ಲೇಟ್‌ಲೆಟ್‌ಗಳ ಕೊರತೆಗಾಗಿ ಕೊಡುವ ಟ್ಯಾಬ್ಲೆಟ್ ಒಂದನ್ನು ಚೀಟಿಯಲ್ಲಿ ಬರೆದು ರೋಗಿಯ ಸಂಬಂಧಿಕರಿಗೆ ತಂದುಕೊಡಲು ಸೂಚಿಸಿದ್ದಾರೆ.

ವೈದ್ಯರು ಬರೆದ ಔಷಧಿಯೆಂದೇ ನಂಬಿದ ಕುಟುಂಬದವರು ಮಂಡ್ಯ ನಗರದ ಅನೇಕ ಮೆಡಿಕಲ್ ಅಂಗಡಿಗಳಲ್ಲಿ ಹುಡುಕಾಡಿದರೂ ಅದು ಲಭ್ಯವಾಗಿರಲಿಲ್ಲ. ಕೊನೆಗೆ ಮತ್ತೊಂದು ಮೆಡಿಕಲ್ ಅಂಗಡಿಯವರೊಬ್ಬರು ಈ ಔಷಧಿಯನ್ನು ಬೆಂಗಳೂರಿನಿಂದ ತರಿಸಬೇಕಾಗುತ್ತದೆ ಮತ್ತು ಇದರ ಬೆಲೆ ಸುಮಾರು ₹2,500 ರಿಂದ ₹3,000 ಆಗುತ್ತದೆ ಎಂದು ತಿಳಿಸಿದ್ದಾರೆ.

​ಮಗಳ ಆರೋಗ್ಯವೇ ಮುಖ್ಯ ಎಂದು ಭಾವಿಸಿದ ಬಡ ಕುಟುಂಬ ಹಣ ಹೊಂದಿಸಲು ಮುಂದಾಗಿತ್ತು. ಆದರೆ ಮೆಡಿಕಲ್ ಶಾಪ್ ನವರಿಗೆ ಈ ಔಷಧಿಯ ಬಗ್ಗೆ ಅನುಮಾನ ವ್ಯಕ್ತವಾಗಿ, ಸಾಮಾನ್ಯವಾಗಿ ಈ ಔಷಧಿ (tablet) ಈ ರೋಗಿಗೆ ಅಗತ್ಯವಿರುವುದಿಲ್ಲ, ಮತ್ತೊಮ್ಮೆ ಆಸ್ಪತ್ರೆಯಲ್ಲಿ ಖಚಿತಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ಬಳಿಕ ಕುಟುಂಬದವರು ಹೆರಿಗೆ ವಿಭಾಗದಲ್ಲಿದ್ದ ಸ್ಟಾಫ್ ನರ್ಸ್ ಅವರನ್ನು ಪ್ರಶ್ನಿಸಿದಾಗ, ಅದು ನಿಮಗೆ ಬರೆದ ಔಷಧಿಯಲ್ಲ, ತಪ್ಪಾಗಿ ಬೇರೆ ರೋಗಿಗೆ ಬರೆದ ಚೀಟಿ ನಿಮ್ಮ ಕೈಗೆ ಹೋಗಿದೆ ಎಂದು ಹೇಳಿ, ತಕ್ಷಣವೇ ಆ ಚೀಟಿಯನ್ನು ವಾಪಸ್ ಪಡೆದು ಹರಿದು ಹಾಕಿ ಮತ್ತೊಂದು ಚೀಟಿಯಲ್ಲಿ ಬೇರೊಂದು ಮಾತ್ರೆಯನ್ನು ಬರೆದು ನೀಡಿದ್ದಾರೆ.

ಅದೃಷ್ಟವಶಾತ್, ಕುಟುಂಬಸ್ಥರು ಮೊದಲೇ ಆ ಚೀಟಿಯ ಫೋಟೋವನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದರು.
​ಈ ಬೆಳವಣಿಗೆಯಿಂದ ಅನುಮಾನಗೊಂಡ ಕುಟುಂಬ ಈ ಮಾಹಿತಿಯನ್ನು ಮಾಧ್ಯಮದ ಗಮನಕ್ಕೆ ತಂದಿದ್ದಾರೆ.

ನಡೆಸಿದ ತನಿಖೆಯಲ್ಲಿ ಮತ್ತೊಂದು ಆತಂಕಕಾರಿ ಅಕ್ರಮದ ಆರೋಪ ಬೆಳಕಿಗೆ ಬಂದಿದೆ. ಅಮಾಯಕ ಹಾಗೂ ಅಕ್ಷರಜ್ಞಾನ ಕಡಿಮೆ ಇರುವ ರೋಗಿಗಳ ಕುಟುಂಬಗಳನ್ನು ಗುರಿಯಾಗಿಸಿ, ಔಷಧಿ ತರದಿದ್ದರೆ ರೋಗಿಯ ಜೀವಕ್ಕೆ ಅಪಾಯ ಎಂಬ ಭಯ ಹುಟ್ಟಿಸಿ ದುಬಾರಿ ಔಷಧಿಗಳನ್ನು ಖರೀದಿಸಲು ಒತ್ತಾಯಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಆ ಔಷಧಿಗಳನ್ನು ಸಂಬಂಧಪಟ್ಟ ರೋಗಿಗಳಿಗೆ ನೀಡದೇ ಅವಶ್ಯಕತೆ ಇರುವ ಮತ್ತೊಬ್ಬ ರೋಗಿಗಳಿಗೆ ಮಾರಾಟ ಮಾಡುವ ಜಾಲ ಕಾರ್ಯನಿರ್ವಹಿಸುತ್ತಿದೆ ಎಂಬ ಗಂಭೀರ ಆರೋಪವು ಕೇಳಿ ಬರುತ್ತಿದೆ. ಮೊದಲು ನೀಡಿದ್ದ ಚೀಟಿಯಲ್ಲಿ ಮತ್ತೊಬ್ಬ ರೋಗಿಯ ಹೊರರೋಗಿ ಸಂಖ್ಯೆ ಇರುವುದನ್ನು ಕಂಡು, ಮಾಧ್ಯಮದವರು ಈ ವಿಚಾರವನ್ನು ವೈದ್ಯಕೀಯ ಅಧಿಕ್ಷಕರಾದ ಶಿವಕುಮಾರ್ ರವರ ಗಮನಕ್ಕೆ ತಂದಿದ್ದಾರೆ.

ಕುಟುಂಬಸ್ಥರು ಹಾಗೂ ಪತ್ರಕರ್ತರ ಸಮ್ಮುಖದಲ್ಲಿ ಸ್ಟಾಫ್ ನರ್ಸ್ ಅವರನ್ನು ಕರೆದು ವಿಚಾರಿಸಿದಾಗ, ಮೊದಲು ಅವರು ವೈದ್ಯರೇ ಬರೆದಿರುವುದು ಎಂದು ಹೇಳಿಕೆ ನೀಡಿದ್ದರು. ಆದರೆ ಹೆರಿಗೆ ವಿಭಾಗದ ವೈದ್ಯರನ್ನು ಕರೆಸಿ ವಿಚಾರಿಸಿದಾಗ ಅವರು ತಾನು ಬರೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆಗ ಹೆದರಿದ ಸ್ಟಾಫ್ ನರ್ಸ್ ನಾನೇ ಬರೆದಿರುವುದಾಗಿ ಒಪ್ಪಿಕೊಂಡು, ಮೆಡಿಕಲ್‌ನಲ್ಲಿ ಔಷಧಿ ಸಿಗುತ್ತದೆಯೇ ಎಂದು ಕೇಳಲು ನೀಡಿದ್ದೆ ಎಂದು ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ.

​ಈ ಘಟನೆಯು ಆಸ್ಪತ್ರೆಯ ಆಡಳಿತ ಮಂಡಳಿಯ ಮೇಲ್ವಿಚಾರಣೆಯ ಲೋಪವನ್ನು ಎತ್ತಿಹಿಡಿದಿದೆ. ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ರೋಗಿಗಳ ಹೆಸರಿನಲ್ಲಿ ದುಬಾರಿ ಔಷಧಿಗಳನ್ನು ಬರೆಯುವ ಧೈರ್ಯ ಹೇಗೆ ಬರುತ್ತದೆ ಮತ್ತು ಬಡ ರೋಗಿಗಳ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು ಸಂಘಟಿತ ಔಷಧ ದಂಧೆ ನಡೆಯುತ್ತಿದೆಯೇ ಎಂಬ ಗಂಭೀರ ಪ್ರಶ್ನೆಗಳು ಎದ್ದಿವೆ.

ಈ ಆರೋಪಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆದು, ತಪ್ಪಿತಸ್ಥ ಸಿಬ್ಬಂದಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಸರ್ಕಾರಿ ಆಸ್ಪತ್ರೆಗಳ ಮೇಲಿನ ಸಾರ್ವಜನಿಕರ ನಂಬಿಕೆಯನ್ನು ಉಳಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!