ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯ 5 ಮಹಾನಗರ ಪಾಲಿಕೆಗಳ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಚುನಾವಣೆ ಆಯೋಗದ ನಡುವೆ ಈಗ ನೇರ ಹಣಾಹಣಿ ಶುರುವಾಗಿದೆ. ಮಾನ್ಯ ಸುಪ್ರೀಂ ಕೋರ್ಟ್ ನೀಡಿರುವ ಗಡುವಿನಂತೆ ಜೂನ್ 30, 2026 ರೊಳಗೆ ಚುನಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಯೋಗವು ಪಣತೊಟ್ಟಿದ್ದು, ಈ ಬಗ್ಗೆ ಇಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.
ವಾಸ್ತವದಲ್ಲಿ, ರಾಜ್ಯ ಸರ್ಕಾರವು ಜನಗಣತಿ ಕಾರ್ಯ ಮತ್ತು ಶೈಕ್ಷಣಿಕ ಪರೀಕ್ಷೆಗಳ ನೆಪವೊಡ್ಡಿ ಚುನಾವಣೆಯನ್ನು ಸೆಪ್ಟೆಂಬರ್ ಅಂತ್ಯದವರೆಗೆ ಮುಂದೂಡುವಂತೆ ಆಯೋಗಕ್ಕೆ ಮನವಿ ಮಾಡಿತ್ತು. ಏಪ್ರಿಲ್ 16 ರಿಂದ ಮೇ 15 ರವರೆಗೆ ನಡೆಯಲಿರುವ ಜನಗಣತಿ ಕಾರ್ಯದಲ್ಲಿ ಸಿಬ್ಬಂದಿಗಳು ನಿರತರಾಗಿರುವುದರಿಂದ ಮತ್ತು ಜೂನ್ ತಿಂಗಳಲ್ಲಿ ಪರೀಕ್ಷಾ ಕರ್ತವ್ಯಗಳಿರುವುದರಿಂದ ಮಾನವ ಸಂಪನ್ಮೂಲ ಹಾಗೂ ಲಾಜಿಸ್ಟಿಕ್ಸ್ ಒದಗಿಸಲು ಕಷ್ಟವಾಗುತ್ತದೆ ಎಂಬುದು ಸರ್ಕಾರದ ವಾದವಾಗಿತ್ತು.
ಆದರೆ, ಸರ್ಕಾರದ ಈ ಬೇಡಿಕೆಯನ್ನು ತಳ್ಳಿಹಾಕಿರುವ ರಾಜ್ಯ ಚುನಾವಣೆ ಆಯೋಗವು, ತಾನು ಈಗಾಗಲೇ ಚುನಾವಣೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿರುವುದಾಗಿ ಸ್ಪಷ್ಟಪಡಿಸಿದೆ. ಈಗಾಗಲೇ ಒಟ್ಟು 369 ವಾರ್ಡ್ಗಳ ಅಂತಿಮ ಮತದಾರರ ಪಟ್ಟಿಯನ್ನು ಏಪ್ರಿಲ್ 18 ರಂದೇ ಪ್ರಕಟಿಸಲಾಗಿದೆ. ಅಲ್ಲದೆ, ಸುಪ್ರೀಂ ಕೋರ್ಟ್ನಲ್ಲಿ ತಾನು ಯಾವುದೇ ರೀತಿಯಲ್ಲಿ ಸಮಯಾವಕಾಶ ಕೋರಿಲ್ಲ ಅಥವಾ ಚುನಾವಣೆ ಮುಂದೂಡುವಂತೆ ಅರ್ಜಿ ಸಲ್ಲಿಸಿಲ್ಲ ಎಂದು ಆಯೋಗವು ತನ್ನ ಪ್ರಕಟಣೆಯಲ್ಲಿ ಖಡಕ್ ಆಗಿ ತಿಳಿಸಿದೆ.
ಚುನಾವಣೆಗೆ ಬೇಕಾದ ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಕೋರಲಾಗಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ನಿಗದಿತ ಅವಧಿಯಲ್ಲೇ ಪ್ರಕ್ರಿಯೆ ಮುಗಿಸುವುದು ಆಯೋಗದ ಗುರಿಯಾಗಿದೆ. ಇದರಿಂದಾಗಿ ಪಾಲಿಕೆ ಚುನಾವಣೆಯ ಭವಿಷ್ಯ ಈಗ ಸರ್ಕಾರದ ನಡೆ ಹಾಗೂ ಕೋರ್ಟ್ ನಿರ್ಧಾರದ ಮೇಲೆ ನಿಂತಿದೆ. ಒಟ್ಟಿನಲ್ಲಿ, ಬೆಂಗಳೂರಿನ ಮತದಾರರು ಜೂನ್ ತಿಂಗಳಲ್ಲಿ ಮತದಾನ ಮಾಡಲು ಸಿದ್ಧರಾಗಬೇಕಾದ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ.


