Headlines

ಮಂಡ್ಯ ಮೂಲದ ವ್ಯಕ್ತಿಯ ಐಡೆಂಟಿಟಿ ಬಳಸಿ ಬೆಸ್ಕಾಂ ಇಂಜಿನಿಯರ್ ಆಗಿದ್ದ ಬೊಮ್ಮೇಗೌಡನ ಆಟ ಕ್ಲೈಮ್ಯಾಕ್ಸ್ನಲ್ಲಿ ಪ್ಲಾಪ್!

ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ 40 ವರ್ಷಗಳ ಹಿಂದಿನ ಮಹಾ ವಂಚನೆಯೊಂದು ತನಿಖೆಯ ಹಂತದಲ್ಲಿದೆ. 1982ರಲ್ಲಿ ಮಂಡ್ಯ ಜಿಲ್ಲೆ ಮಳವಳ್ಳಿಯ ಎಂ. ರಾಚಯ್ಯ ಎಂಬ ಯುವಕ ಶಿವಮೊಗ್ಗದ ಕರ್ನಾಟಕ ವಿದ್ಯುತ್ ಮಂಡಳಿಯ ಗ್ಯಾಂಗ್‌ಮನ್ ಹುದ್ದೆಯ ಸಂದರ್ಶನಕ್ಕೆ ಹೋಗಿದ್ದಾಗ ಅವರ ಮಾರ್ಕ್ಸ್‌ಕಾರ್ಡ್ ಮತ್ತು ಪ್ರಮಾಣಪತ್ರಗಳು ಕಳೆದುಹೋಗಿದ್ದವು. ಅದೇ ಸಂದರ್ಶನಕ್ಕೆ ಬಂದಿದ್ದ ಹಾಸನ ಮೂಲದ ಬೊಮ್ಮೇಗೌಡನಿಗೆ ಈ ದಾಖಲೆಗಳು ಸಿಕ್ಕಿದ್ದವು. ಬೊಮ್ಮೇಗೌಡ ತಾನೇ ‘ರಾಚಯ್ಯ’ ಎಂದು ಸೋಗು ಹಾಕಿ, ಆ ನಕಲಿ ಐಡೆಂಟಿಟಿ ಮೂಲಕವೇ ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದ.

​ಅಸಲಿ ರಾಚಯ್ಯ ಕೂಲಿ ಕೆಲಸ ಮಾಡಿಕೊಂಡಿದ್ದರೆ, ಇತ್ತ ಬೊಮ್ಮೇಗೌಡ ಮಾತ್ರ ರಾಚಯ್ಯನ ಹೆಸರಲ್ಲೇ ಬೆಸ್ಕಾಂನಲ್ಲಿ ಹಂತ ಹಂತವಾಗಿ ಪ್ರಮೋಷನ್ ಪಡೆಯುತ್ತಾ ಸರ್ಕಾರಿ ಸಂಬಳ ಪಡೆದಿದ್ದ. ಅಷ್ಟೇ ಅಲ್ಲದೆ, 2003 ರಲ್ಲಿ ಕೋರ್ಟ್‌ನಿಂದ ಅಫಿಡವಿಟ್ ತಂದು ಅಧಿಕೃತವಾಗಿ ತನ್ನ ಹೆಸರನ್ನು ಮತ್ತೆ ಬೊಮ್ಮೇಗೌಡ ಎಂದೇ ಬದಲಿಸಿಕೊಂಡು ಇಲಾಖೆಯ ಕಣ್ಣಿಗೆ ಮಣ್ಣೆರಚಿದ್ದ.

​ಸುಮಾರು 37 ವರ್ಷಗಳ ಬಳಿಕ, ಅಂದರೆ 2019 ರಲ್ಲಿ ಅಸಲಿ ರಾಚಯ್ಯನಿಗೆ ಈ ಸತ್ಯ ಗೊತ್ತಾಗಿದೆ. ಜೈಲಿಗೆ ಕಳುಹಿಸುವುದಾಗಿ ಹೆದರಿಸಿದಾಗ ಬೊಮ್ಮೇಗೌಡ, ವರ್ಷಕ್ಕೆ 2 ರಿಂದ 3 ಲಕ್ಷ ರೂ. ಕೊಡುವುದಾಗಿ ರಾಜಿ ಮಾಡಿಕೊಂಡಿದ್ದ. 2022 ರಲ್ಲಿ ನಿವೃತ್ತಿಯಾದಾಗ ಬಂದ ಸೆಟಲ್‌ಮೆಂಟ್ ಹಣದಲ್ಲಿ ಭರ್ಜರಿ 10 ಲಕ್ಷ ರೂಪಾಯಿಯನ್ನು ನಿವೃತ್ತ ಎಂಜಿನಿಯರ್ ಸುಭಾಷ್ ಎಂಬುವವರ ಮಧ್ಯಸ್ಥಿಕೆಯಲ್ಲಿ ಅಸಲಿ ರಾಚಯ್ಯನಿಗೆ ತಲುಪಿಸಿದ್ದ.

​ಆದರೆ, ಹತ್ತು ಲಕ್ಷ ರೂಪಾಯಿ ಪಡೆದ ಮೇಲೂ ಅಸಲಿ ರಾಚಯ್ಯ, ಬೊಮ್ಮೇಗೌಡನ ಪೆನ್ಷನ್‌ನಲ್ಲೂ ಅರ್ಧ ಪಾಲು ಬೇಕು ಎಂದು ಪಟ್ಟು ಹಿಡಿದಿದ್ದಾನೆ. ಇದಕ್ಕೆ ಬೊಮ್ಮೇಗೌಡ ಒಪ್ಪದಿದ್ದಾಗ, ಸಿಟ್ಟಿಗೆದ್ದ ರಾಚಯ್ಯ ಬೆಸ್ಕಾಂ ವಿಚಕ್ಷಣಾ ದಳಕ್ಕೆ ದೂರು ನೀಡಿದ್ದಾನೆ. ಸದ್ಯ ಇಲಾಖಾ ತನಿಖೆಯಲ್ಲಿ ವಂಚನೆ ಸಾಬೀತಾಗಿದ್ದು, ರಾಜಾಜಿನಗರ ಪೊಲೀಸರು ಬೊಮ್ಮೇಗೌಡ, ಅಸಲಿ ರಾಚಯ್ಯ ಹಾಗೂ ಮಧ್ಯಸ್ಥಿಕೆ ವಹಿಸಿದ್ದ ಸುಭಾಷ್ ಮೂವರ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!