ಮಧ್ಯಪ್ರದೇಶದ ಅತ್ಯಂತ ವಿವಾದಿತ ಧಾರ್ಮಿಕ ತಾಣವಾದ ಧಾರಾ ಜಿಲ್ಲೆಯ ಭೋಜಶಾಲಾ ಸಂಕೀರ್ಣದ ಮೇಲೆ ಈಗ ಸಂಪೂರ್ಣವಾಗಿ ಭಗವಾ ಧ್ವಜ ಹಾರಾಡಿದೆ! ದಶಕಗಳ ಕಾಲ ನಡೆದ ಕಾನೂನು ಸಮರಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹೈಕೋರ್ಟ್ ಈ ವಿವಾದಿತ ಜಾಗವನ್ನು ಸಂಪೂರ್ಣವಾಗಿ ಹಿಂದೂಗಳ ಆರಾಧ್ಯ ದೇವತೆ ವಾಗ್ದೇವಿ ಸರಸ್ವತಿ ದೇವಿಯ ದೇವಸ್ಥಾನ ಎಂದು ಘೋಷಿಸಿ ಐತಿಹಾಸಿಕ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರಿದ್ದ ದ್ವಿಸದಸ್ಯ ಪೀಠವು ಈ ಭರ್ಜರಿ ಆದೇಶ ಹೊರಡಿಸಿದ್ದು, ಹಿಂದೂಗಳ ಶತಮಾನಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.
ಇಲ್ಲಿಯವರೆಗೆ ಜಾರಿಯಲ್ಲಿದ್ದ ವ್ಯವಸ್ಥೆಯ ಪ್ರಕಾರ ಹಿಂದೂಗಳು ಮಂಗಳವಾರ ಪೂಜೆ ಮಾಡಿದರೆ, ಮುಸ್ಲಿಮರು ಶುಕ್ರವಾರ ನಮಾಜ್ ಮಾಡುತ್ತಿದ್ದರು. ಆದರೆ 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) ನೀಡಿದ್ದ ಈ ಆದೇಶವನ್ನು ಕೋರ್ಟ್ ಈಗ ಸಂಪೂರ್ಣವಾಗಿ ರದ್ದುಗೊಳಿಸಿದೆ. ಇನ್ನು ಮುಂದೆ ಈ ಸಂಕೀರ್ಣದಲ್ಲಿ ಮುಸ್ಲಿಮರು ಪ್ರಾರ್ಥನೆ ಮಾಡುವಂತಿಲ್ಲ ಎಂದು ಖಡಕ್ ಆಗಿ ಹೇಳಿರುವ ನ್ಯಾಯಾಲಯ, ಮಸೀದಿ ನಿರ್ಮಾಣಕ್ಕಾಗಿ ಬೇರೆ ಪರ್ಯಾಯ ಜಾಗವನ್ನು ಹುಡುಕಿಕೊಳ್ಳುವಂತೆ ಮುಸ್ಲಿಂ ಸಮುದಾಯಕ್ಕೆ ಸೂಚಿಸಿದೆ. ಮುಸ್ಲಿಂ ಮಂಡಳಿ ಅರ್ಜಿ ಸಲ್ಲಿಸಿದರೆ ಸರ್ಕಾರ ಜಾಗ ನೀಡುವ ಬಗ್ಗೆ ಯೋಚಿಸಬಹುದು ಎಂದು ಕೋರ್ಟ್ ಹೇಳಿದೆ.
ಈ ಸಂಕೀರ್ಣದ ಕದನ ಇಷ್ಟಕ್ಕೇ ಮುಗಿಯುವುದಿಲ್ಲ, ಇದರ ಹಿಂದೆ ಭೀಕರ ಇತಿಹಾಸದ ಪುರಾವೆಗಳಿವೆ!
ಕಳೆದ ಮಾರ್ಚ್ ತಿಂಗಳಲ್ಲಿ ಹೈಕೋರ್ಟ್ ಆದೇಶದಂತೆ ಸತತ 98 ದಿನಗಳ ಕಾಲ ಇಲ್ಲಿ ಹಗಲು-ರಾತ್ರಿ ಹೈಟೆಕ್ ವೈಜ್ಞಾನಿಕ ಸಮೀಕ್ಷೆ ನಡೆಸಲಾಗಿತ್ತು. ಈ ವೇಳೆ ನೆಲದಡಿಯಲ್ಲಿ ಅಡಗಿದ್ದ ಭೀಕರ ಸತ್ಯಗಳು ಹೊರಬಂದಿದ್ದವು. ಸಮೀಕ್ಷೆಯಲ್ಲಿ ಗಣೇಶ, ವಿಷ್ಣು ಮತ್ತು ನರಸಿಂಹ ದೇವರ ಬರೋಬ್ಬರಿ 94 ಮೂರ್ತಿಗಳು ಹಾಗೂ 150ಕ್ಕೂ ಹೆಚ್ಚು ಸಂಸ್ಕೃತ ಶ್ಲೋಕಗಳಿದ್ದ ಶಾಸನಗಳು ಪತ್ತೆಯಾಗಿದ್ದವು. ಈ ರಹಸ್ಯ ವರದಿಯೇ ಮುಸ್ಲಿಂ ಮಂಡಳಿಯ ವಾದಕ್ಕೆ ಮರಣಶಾಸನ ಬರೆಯಿತು. ರಾಜ ಭೋಜ ಕಟ್ಟಿಸಿದ್ದ ಈ ಅದ್ಭುತ ವಿದ್ಯಾಕೇಂದ್ರವನ್ನು ಧ್ವಂಸ ಮಾಡಿ, ಅದರದೇ ಕಂಬಗಳನ್ನು ಬಳಸಿ ಮಸೀದಿ ಕಟ್ಟಲಾಗಿದೆ ಎಂಬುದು ಸಾಬೀತಾಗಿದೆ.
ಕೋರ್ಟ್ನ ಈ ತೀರ್ಪಿನಿಂದಾಗಿ ಇಡೀ ಮಧ್ಯಪ್ರದೇಶದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ವಿವಾದಿತ ಸ್ಥಳದ ಸುತ್ತಮುತ್ತ ಸುಮಾರು 1,200ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದ್ದು, 12 ಪದರಗಳ ಕಡುಭದ್ರತೆ ಒದಗಿಸಲಾಗಿದೆ. ಶಾಂತಿ ಕಾಪಾಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಮತ್ತೊಂದು ವಿಶೇಷ ಎಂದರೆ, ಲಂಡನ್ನ ಬ್ರಿಟಿಷ್ ಮ್ಯೂಸಿಯಂನಲ್ಲಿ ಇಡಲಾಗಿರುವ ಈ ದೇವಸ್ಥಾನದ ಅಸಲಿ ವಾಗ್ದೇವಿ ಮೂರ್ತಿಯನ್ನು ಭಾರತಕ್ಕೆ ವಾಪಸ್ ತಂದು ಇದೇ ಜಾಗದಲ್ಲಿ ಮರುಪ್ರತಿಷ್ಠಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಪ್ರಮುಖ ನಿರ್ದೇಶನ ನೀಡಿದೆ. ಈ ನಡುವೆ ಮುಸ್ಲಿಂ ಮತ್ತು ಜೈನ ಸಮುದಾಯಗಳು ಈ ತೀರ್ಪನ್ನು ಸುಪ್ರೀಂ ಕೋರ್ಟ್ನಲ್ಲಿ ಚಾಲೆಂಜ್ ಮಾಡಲು ರೆಡಿಯಾಗುತ್ತಿವೆ.

