Headlines

ಸಾರ್ವಜನಿಕ ಸೇವಾ ಕಾಯ್ದೆ ಗಾಳಿಗೆ ತೂರಿದ ಪಿಡಿಒ ಶೋಭಾರಾಣಿ: ಮೇಲಾಧಿಕಾರಿಗಳ ಮೌನದ ವಿರುದ್ಧ ಸಾರ್ವಜನಿಕರ ತೀವ್ರ ಅಸಮಾಧಾನ.!?

ಶ್ರೀರಂಗಪಟ್ಟಣ ತಾಲ್ಲೂಕಿನ ಕೆ. ಶೆಟ್ಟಿಹಳ್ಳಿ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಸಾರ್ವಜನಿಕ ಸೇವೆ ಸಂಪೂರ್ಣ ಹದಗೆಟ್ಟಿದ್ದು, ಕಚೇರಿ ವೇಳೆಯಲ್ಲೇ ಬೀಗ ಹಾಕಿ ಸಿಬ್ಬಂದಿ ನಾಪತ್ತೆಯಾಗಿರುವ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸೋಮವಾರದ ಬಿರುಬಿಸಿಲಿನ ನಡುವೆಯೂ ವಿವಿಧ ಪ್ರಮಾಣಪತ್ರಗಳು, ತುರ್ತು ದಾಖಲಾತಿಗಳು ಹಾಗೂ ಸರ್ಕಾರದ ಸೌಲಭ್ಯಗಳಿಗಾಗಿ ದೂರದ ಗ್ರಾಮಗಳಿಂದ ಬಂದಿದ್ದ ಬಡ ಜನತೆ ಪಂಚಾಯತಿ ಕಚೇರಿ ಎದುರು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಸಾರ್ವಜನಿಕರನ್ನು ಸ್ವಾಗತಿಸಿದ್ದು ಮಾತ್ರ ಕಚೇರಿಯ ಮುಖ್ಯ ದ್ವಾರಕ್ಕೆ ಹಾಕಿದ್ದ ಬೀಗವೇ ಎಂಬುದು ಜನರ ಆಕ್ರೋಶಕ್ಕೆ ಕಾರಣವಾಯಿತು.
ದಿನಾಂಕ 18-05-2026ರ ಸೋಮವಾರ ಮಧ್ಯಾಹ್ನ ಸುಮಾರು 12:24ರ ವೇಳೆಗೆ, ಕಡ್ಡಾಯ ಸರ್ಕಾರಿ ಕೆಲಸದ ವೇಳೆಯಲ್ಲೇ ಇಡೀ ಪಂಚಾಯತಿ ಸಿಬ್ಬಂದಿ ಕಚೇರಿಗೆ ಬೀಗ ಜಡಿದು ತೆರಳಿರುವುದು ಬೆಳಕಿಗೆ ಬಂದಿದೆ. ಸ್ಥಳದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ (PDO) ಶೋಭಾರಾಣಿ ಸೇರಿದಂತೆ ಯಾವುದೇ ಸಿಬ್ಬಂದಿ ಕಾಣಿಸಿರಲಿಲ್ಲ. ಸರ್ಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಾರ್ವಜನಿಕರನ್ನು ರಸ್ತೆ ಮಧ್ಯೆ ನಿಲ್ಲಿಸಿರುವ ಈ ವರ್ತನೆಗೆ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಘಟನೆಯ ಜಿಪಿಎಸ್ -ಟ್ಯಾಗ್ ಸಾಕ್ಷ್ಯಚಿತ್ರಗಳನ್ನು ಸ್ಥಳದಲ್ಲೇ ಸೆರೆಹಿಡಿದ ಸಾರ್ವಜನಿಕರು, ಇದು ಕರ್ತವ್ಯ ಲೋಪ ಮಾತ್ರವಲ್ಲ, ಸಾರ್ವಜನಿಕ ಸೇವಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ಕಿಡಿಕಾರಿದ್ದಾರೆ.

ಈ ಪಂಚಾಯತಿಯ ಪಿ.ಡಿ.ಓ ಶೋಭಾರಾಣಿ ಅವರ ಆಡಳಿತ ವೈಖರಿ ಮತ್ತು ಬೇಜವಾಬ್ದಾರಿತನದ ವಿರುದ್ಧ ಇದೇ ಮೊದಲ ಬಾರಿಗೆ ಆರೋಪ ಕೇಳಿಬರುತ್ತಿಲ್ಲ ಎನ್ನುವುದು ಮತ್ತೊಂದು ಗಂಭೀರ ಸಂಗತಿ. ಇವರ ಅಧಿಕಾರಾವಧಿಯಲ್ಲಿ ನಡೆದಿರುವ ಎಡವಟ್ಟುಗಳು, ಸಾರ್ವಜನಿಕರ ಅಲೆದಾಟ ಮತ್ತು ಆಡಳಿತ ವೈಫಲ್ಯದ ಕುರಿತು ಈಗಾಗಲೇ ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯತ್ ಹಾಗೂ ಮಂಡ್ಯ ಜಿಲ್ಲಾ ಪಂಚಾಯತ್ ಕಚೇರಿಗಳಲ್ಲಿ ಹಲವು ಗಂಭೀರ ದೂರುಗಳು ದಾಖಲಾಗಿರುವುದಾಗಿ ತಿಳಿದುಬಂದಿದೆ. ಆದರೂ ಇದುವರೆಗೆ ಯಾವುದೇ ಪರಿಣಾಮಕಾರಿ ಶಿಸ್ತು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅನುಮಾನಕ್ಕೆ ಕಾರಣವಾಗಿದೆ.

ಸಿಇಓ ಕೆ. ಆರ್. ನಂದಿನಿ

ಮೇಲಧಿಕಾರಿಗಳ ಮೌನ ಮತ್ತು ವಿಳಂಬ ನೀತಿ ಹಾಗೂ ಸ್ಥಳೀಯ ಶಾಸಕರ ಬೆಂಬಲವೇ ಸದರಿ ಅಧಿಕಾರಿಗೆ ಮತ್ತಷ್ಟು ನಿರ್ಲಕ್ಷ್ಯದಿಂದ ವರ್ತಿಸಲು ಪ್ರೋತ್ಸಾಹ ನೀಡಿದೆಯೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಚೇರಿ ವೇಳೆಯಲ್ಲೇ ಸರ್ಕಾರಿ ಕಚೇರಿಗೆ ಬೀಗ ಹಾಕಿ ತೆರಳುವ ಮಟ್ಟಿಗೆ ಆಡಳಿತ ಶಿಥಿಲಗೊಂಡಿರುವುದು ಇಡೀ ಇಲಾಖೆಯ ಗೌರವಕ್ಕೆ ಧಕ್ಕೆಯಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರದಿಂದ ಸಾರ್ವಜನಿಕರ ಸೇವೆಗಾಗಿ ಸಂಬಳ ಪಡೆಯುವ ಜವಾಬ್ದಾರಿಯುತ ಅಧಿಕಾರಿಗಳು ಈ ರೀತಿಯಾಗಿ ವರ್ತಿಸುತ್ತಿರುವುದು ಗ್ರಾಮೀಣ ಜನತೆಯಲ್ಲಿ ಅಸಹನೆ ಹೆಚ್ಚಿಸಿದೆ. ಈ ಘಟನೆಯ ಜಿಪಿಎಸ್ -ಟ್ಯಾಗ್ ಸಾಕ್ಷ್ಯವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEO) ಹಾಗೂ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು (EO) ಗಂಭೀರವಾಗಿ ಪರಿಗಣಿಸುತ್ತಾರೆಯೇ? ನಿರಂತರವಾಗಿ ಸಾರ್ವಜನಿಕರ ದೂರುಗಳಿಗೆ ಗುರಿಯಾಗಿರುವ ಪಿ.ಡಿ.ಓ ಶೋಭಾರಾಣಿ ಹಾಗೂ ಕರ್ತವ್ಯಲೋಪ ಎಸಗಿದ ಸಿಬ್ಬಂದಿ ವಿರುದ್ಧ ಇಲಾಖಾ ತನಿಖೆ ನಡೆಸಿ ಕಠಿಣ ಶಿಸ್ತು ಕ್ರಮ ಜರುಗಿಸಲಾಗುತ್ತದೆಯೇ ಎಂಬುದನ್ನು ಸಾರ್ವಜನಿಕರು ಕಾದು ನೋಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!