ಮಾನ್ಯ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಕೆಯಾಗಿರುವ ಒಂದು ಸ್ಪೋಟಕ ದೂರು ಈಗ ಮಂಡ್ಯ ಮತ್ತು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಮಂಡ್ಯ ಹಾಗೂ ಮಳವಳ್ಳಿ ತಾಲೂಕುಗಳ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರದ ತನಿಖೆ ನಡೆಸಲು ಬಂದಿರುವ ಉಪ ಲೋಕಾಯುಕ್ತರ ಹೆಸರಿನಲ್ಲೇ ಈಗ ಕೋಟ್ಯಂತರ ರೂಪಾಯಿ ವಸೂಲಿ ದಂಧೆ ನಡೆಯುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿಗಳಿಗೆ ತನಿಖೆಯಿಂದ ‘ಕ್ಲೀನ್ ಚಿಟ್’ ಕೊಡಿಸುವುದಾಗಿ ನಂಬಿಸಿ, ಪಂಚಾಯತಿ ಮಟ್ಟದ ಸಿಬ್ಬಂದಿಯಿಂದ ಹಿಡಿದು ಕ್ಲಾಸ್ 1 ದರ್ಜೆಯ ಅಧಿಕಾರಿಗಳವರೆಗೆ ಎಲ್ಲರಿಂದಲೂ ಲಕ್ಷ ಲಕ್ಷ ಲೂಟಿ ಮಾಡಲಾಗುತ್ತಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ತಲ್ಲಣ ಸೃಷ್ಟಿಸಿವೆ.
ಈ ಇಡೀ ಲೂಟಿ ದಂಧೆಯ ಹಿಂದೆ ಜಿಲ್ಲಾಡಳಿತದ ಪ್ರಭಾವಿ ವ್ಯಕ್ತಿ, ಓರ್ವ ವಕೀಲ ಹಾಗೂ ಲೋಕಾಯುಕ್ತ ಇಲಾಖೆಯ ಕೆಳಹಂತದ ಕೆಲವು ಭ್ರಷ್ಟ ಅಧಿಕಾರಿಗಳ ಕರಾಳ ಹಸ್ತವಿದೆ ಎಂದು ದೂರಿನಲ್ಲಿ ನೇರವಾಗಿ ಬೆರಳು ಮಾಡಿ ತೋರಿಸಲಾಗಿದೆ. ಕಳೆದ ಬಾರಿ ಉಪಲೋಕಾಯುಕ್ತರು ಮಂಡ್ಯಕ್ಕೆ ಭೇಟಿ ನೀಡಿದ್ದಾಗ ಬರೋಬ್ಬರಿ 25 ಲಕ್ಷ ರೂಪಾಯಿ ಸಂಗ್ರಹಿಸಿ ತಲುಪಿಸಲಾಗಿತ್ತು, ಆದರೆ ಈ ಬಾರಿ ಬೇಡಿಕೆ ದುಪ್ಪಟ್ಟಾಗಿದ್ದು, ಅಧಿಕಾರಿಗಳಿಗೆ ದೊಡ್ಡ ಮೊತ್ತ ನೀಡುವಂತೆ ತಾಕೀತು ಮಾಡಲಾಗಿದೆ ಎನ್ನಲಾಗಿದೆ. ಯಾರು ಹಣ ಕೊಡುವುದಿಲ್ಲವೋ ಅಂತಹ ಇಲಾಖೆಗಳ ಮೇಲೆ ಉಪಲೋಕಾಯುಕ್ತರಿಂದಲೇ ದಾಳಿ ಮಾಡಿಸುವುದಾಗಿ ಬೆದರಿಕೆ ಹಾಕಲಾಗುತ್ತಿದ್ದು, ಹೀಗೆ ಬೆದರಿಸಿ ವಸೂಲಿ ಮಾಡಿರುವ ಕಲೆಕ್ಷನ್ ಮೊತ್ತ ಈಗಾಗಲೇ ಕನಿಷ್ಠ 2 ಕೋಟಿ ರೂಪಾಯಿ ದಾಟಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಈ ಕಡು ಭ್ರಷ್ಟಾಚಾರದ ಬೆಳವಣಿಗೆಯು ಈ ಹಿಂದೆ ರಾಜ್ಯವನ್ನೇ ನಡುಗಿಸಿದ್ದ ಮಾಜಿ ಲೋಕಾಯುಕ್ತ ಭಾಸ್ಕರ ರಾವ್ ಹಾಗೂ ಅವರ ಮಗ ಲೋಕಾಯುಕ್ತ ಕಚೇರಿಯನ್ನೇ ವಸೂಲಿ ಕೇಂದ್ರ ಮಾಡಿಕೊಂಡಿದ್ದ ಕಪ್ಪು ಇತಿಹಾಸವನ್ನು ಜನರಿಗೆ ಮತ್ತೆ ನೆನಪಿಸುವಂತಿದೆ. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡಬೇಕಾದ ಸಂಸ್ಥೆಯ ಹೆಸರನ್ನೇ ಬಳಸಿಕೊಂಡು ಈ ರೀತಿ ಹಗಲು ದರೋಡೆ ನಡೆಸುತ್ತಿರುವುದು ಮಂಡ್ಯದ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಣ ವಸೂಲಿ ಮಾಡಿರುವ ಕಿಲಾಡಿಗಳ ಸಂಪೂರ್ಣ ವಿವರಗಳನ್ನು ನೀಡಲು ಸಿದ್ಧವಿರುವುದಾಗಿ ದೂರುದಾರರು ತಿಳಿಸಿದ್ದು, ಈ ಹಣ ನಿಜಕ್ಕೂ ಉಪಲೋಕಾಯುಕ್ತರಿಗೆ ತಲುಪುತ್ತಿದೆಯೇ ಅಥವಾ ಅವರ ಹೆಸರಿನಲ್ಲಿ ಮಧ್ಯವರ್ತಿಗಳು ಕೊಳ್ಳೆ ಹೊಡೆಯುತ್ತಿದ್ದಾರೆಯೇ ಎಂಬುದು ತನಿಖೆಯಿಂದಷ್ಟೇ ಹೊರಬರಬೇಕಿದೆ. ಲೋಕಾಯುಕ್ತ ಸಂಸ್ಥೆಯ ಮೇಲಿನ ಕೊನೆಯ ನಂಬಿಕೆಯನ್ನು ಉಳಿಸಿಕೊಳ್ಳಲು ಈ ಕೂಡಲೇ ಉನ್ನತ ಮಟ್ಟದ ಸಮಗ್ರ ತನಿಖೆಗೆ ಆದೇಶಿಸಬೇಕೆಂದು ಮುಖ್ಯ ಕಾರ್ಯದರ್ಶಿಗಳಿಗೆ ಒತ್ತಾಯಿಸಲಾಗಿದೆ.


