ವರದಿ : ರಾಮಸಮುದ್ರ ಎಸ್. ವೀರಭದ್ರ ಸ್ವಾಮಿ
ಚಾಮರಾಜನಗರ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ವಿವಿಧ ಠಾಣೆಗಳಲ್ಲಿ ರೌಡಿಶೀಟ್ ಹೊಂದಿರುವ ಹಾಗೂ ಸರಣಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಾರ್ವಜನಿಕ ನೆಮ್ಮದಿಗೆ ಭಂಗ ತರುತ್ತಿದ್ದ ಸಮಾಜವಿರೋಧಿ ಶಕ್ತಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಶ್ರೀ ಮುತ್ತುರಾಜು ಎಂ. ಖಡಕ್ ವಾರ್ನಿಂಗ್ ನೀಡಿದ್ದಾರೆ. ಮೇ 25ರ ಸೋಮವಾರದಂದು ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲೆಯ ಇತಿಹಾಸದಲ್ಲೇ ಅತಿ ದೊಡ್ಡ ಎನ್ನಲಾದ ರೌಡಿ ಪರೇಡ್ ಆಯೋಜಿಸಲಾಗಿತ್ತು. ಇಡೀ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಿಂದ ಕರೆತರಲಾಗಿದ್ದ ಸುಮಾರು 250ಕ್ಕೂ ಹೆಚ್ಚು ರೌಡಿಶೀಟರ್ಗಳನ್ನು ಸಾಲಾಗಿ ನಿಲ್ಲಿಸಿ ಎಸ್ಪಿ ಅವರೇ ಖುದ್ದಾಗಿ ಕ್ಲಾಸ್ ತಗೆದುಕೊಂಡಿದ್ದಾರೆ.
ಪರೇಡ್ ವೇಳೆ ಪ್ರತಿಯೊಬ್ಬ ರೌಡಿಯ ಹಿನ್ನೆಲೆ ಹಾಗೂ ಸದ್ಯ ಅವರು ತೊಡಗಿಸಿಕೊಂಡಿರುವ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆಹಾಕಿದ ಎಸ್ಪಿ ಮುತ್ತುರಾಜು, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕರುಣೆ ತೋರುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ. “ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಅಪರಾಧ ಕೃತ್ಯಗಳು, ಅಕ್ರಮ ದಂಧೆಗಳು ಅಥವಾ ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ತರುವಂತಹ ಆಟವಾಡಿದರೆ ಜೈಲು ಕಂಬಿ ಎಣಿಸಬೇಕಾಗುತ್ತದೆ. ಪ್ರತಿಯೊಬ್ಬರ ಚಲನವಲನದ ಮೇಲೂ ಪೊಲೀಸರು ಕಣ್ಣಿಟ್ಟಿದ್ದಾರೆ” ಎಂದು ತೀಕ್ಷ್ಣ ಎಚ್ಚರಿಕೆ ರವಾನಿಸಿದ್ದಾರೆ. ಈ ಹೈ-ವೋಲ್ಟೇಜ್ ರೌಡಿ ಪರೇಡ್ನಲ್ಲಿ ಅಪರ ಪೊಲೀಸ್ ಅಧೀಕ್ಷಕ ಶ್ರೀ ಎಂ.ಎನ್. ಶಶಿಧರ್, ಜಿಲ್ಲೆಯ ಇಬ್ಬರು ಡಿಎಸ್ಪಿಗಳು ಸೇರಿದಂತೆ ಎಲ್ಲಾ ವೃತ್ತ ನಿರೀಕ್ಷಕರು (ಸಿಪಿಐ) ಮತ್ತು ಉಪನಿರೀಕ್ಷಕರು (ಪಿಎಸ್ಐ) ಪಾಲ್ಗೊಂಡು ರೌಡಿಗಳ ಜಾತಕ ಪರಿಶೀಲಿಸಿದರು. ಈ ದಿಢೀರ್ ಆ್ಯಕ್ಷನ್ನಿಂದಾಗಿ ಜಿಲ್ಲೆಯ ಪಟಾಲಂಗಳು ಸದ್ಯಕ್ಕೆ ಸೈಲೆಂಟ್ ಆಗುವಂತಾಗಿದೆ.

