Headlines

​ಮೋದಿ ಗ್ಯಾರಂಟಿ Vs ಪಿಣರಾಯಿ ಗೈರು: ₹10 ಸಾವಿರ ಕೋಟಿ ಯೋಜನೆಗಳ ನಡುವೆ ರಾಜಕೀಯ ಹೈಡ್ರಾಮಾ!

ಕೊಚ್ಚಿಯಲ್ಲಿ ನಡೆದ ಅಖಿಲ ಕೇರಳ ದೀವರ ಸಭಾದ ಸುವರ್ಣ ಮಹೋತ್ಸವದಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ₹10 ಸಾವಿರ ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುವ ಮೂಲಕ ಕೇರಳದಲ್ಲಿ ಚುನಾವಣಾ ಪ್ರಚಾರದ ರಣಕಹಳೆ ಮೊಳಗಿಸಿದರು. ಇದೇ ವೇಳೆ ಕೊಲ್ಲಿ ರಾಷ್ಟ್ರಗಳಲ್ಲಿರುವ ಲಕ್ಷಾಂತರ ಭಾರತೀಯರ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ ಅವರು, ಸಂಕಷ್ಟದ ಸಮಯದಲ್ಲಿ ಇಂದಿನ ಭಾರತ ತನ್ನ ಜನರನ್ನು ಕೈಬಿಡುವುದಿಲ್ಲ ಎಂದರು. ವಿದೇಶಿ ಸರ್ಕಾರಗಳು ನೀಡುತ್ತಿರುವ ಸಹಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತಲೇ, ಇಂತಹ ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದು ಕಿಡಿಕಾರಿದರು.

​ದೇಶವನ್ನು ‘ಆತ್ಮನಿರ್ಭರ’ ಮಾಡುವತ್ತ ಹೆಜ್ಜೆ ಇಟ್ಟಿದ್ದೇವೆ ಎಂದ ಮೋದಿ, ಸೌರ ವಿದ್ಯುತ್ ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು. ಕೇರಳವನ್ನು ಭವಿಷ್ಯದ ತಾಂತ್ರಿಕ ಮತ್ತು ಕೃತಕ ಬುದ್ಧಿಮತ್ತೆಯ (AI) ಕೇಂದ್ರವನ್ನಾಗಿ ಮಾಡುವ ‘ಮೋದಿಯ ಗ್ಯಾರಂಟಿ’ಯನ್ನು ಜನರ ಮುಂದಿಟ್ಟರು. ಇದೇ ವೇಳೆ ರಾಹುಲ್ ಗಾಂಧಿ ಅವರ ಹೆಸರೆತ್ತದೆ ‘ಯುವರಾಜ’ ಎಂದು ಟೀಕಿಸಿದ ಅವರು, ಡ್ರೋನ್ ತಯಾರಿಕೆಯಲ್ಲಿ ಭಾರತದ ಪ್ರಗತಿಯ ಬಗ್ಗೆ ಅವರಿಗೆ ಅರಿವಿಲ್ಲ ಎಂದು ಲೇವಡಿ ಮಾಡಿದರು.

​ಇನ್ನೊಂದೆಡೆ, ಈ ಕಾರ್ಯಕ್ರಮವು ಶಿಷ್ಟಾಚಾರದ ವಿವಾದಕ್ಕೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಳಿಯ ಹಾಗೂ ಸಚಿವ ಮೊಹಮ್ಮದ್ ರಿಯಾಸ್ ಅವರಿಗೆ ಆಹ್ವಾನ ನೀಡದ ಕಾರಣ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಗೈರಾಗಿದ್ದರು ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್, ಶಿಷ್ಟಾಚಾರದಂತೆ ಮುಖ್ಯಮಂತ್ರಿಗೆ ಆಹ್ವಾನ ನೀಡಲಾಗಿದೆ, ಅವರ ಕುಟುಂಬದ ಸದಸ್ಯರಿಗಲ್ಲ ಎಂದು ಕುಟುಕಿದರು. ಸಚಿವರ ಗೈರುಹಾಜರಿ ಮತ್ತು ಆಹ್ವಾನ ಪತ್ರಿಕೆಯ ವಿವಾದ ಕೇರಳ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!