Headlines

ಖರ್ಗೆ ಹೇಳಿಕೆ ಬೆನ್ನಲ್ಲೇ ನಾಯಕತ್ವ ಬದಲಾವಣೆ ಚರ್ಚೆಗೆ ಫುಲ್ ಸ್ಟಾಪ್; ಗೃಹ ಸಚಿವರ ಮಹತ್ವದ ಪ್ರತಿಕ್ರಿಯೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಕೇಳಿ ಬರುತ್ತಿದ್ದ ನಾಯಕತ್ವ ಬದಲಾವಣೆ ಚರ್ಚೆಗಳಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯು ಪೂರ್ಣವಿರಾಮ ಹಾಕಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದಿದ್ದಾರೆ.

​ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂಬ ಖರ್ಗೆಯವರ ಹೇಳಿಕೆಯನ್ನು ಸ್ವಾಗತಿಸಿದ ಸಚಿವರು, “ಖರ್ಗೆಯವರು ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ಅಪಾರ ಅನುಭವ ಹೊಂದಿರುವವರು. ಅವರ ಮಾತಿನ ಮುಂದೆ ಬೇರೆ ಮಾತಿಲ್ಲ. ಖರ್ಗೆಯವರು ಒಂದು ನಿರ್ಧಾರ ಪ್ರಕಟಿಸಿದ್ದಾರೆ ಎಂದರೆ ಅದರ ಹಿಂದೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಅವರಂತಹ ಹಿರಿಯ ನಾಯಕರ ಸಮಾಲೋಚನೆ ಇರುತ್ತದೆ. ಅವರೇ ನಮ್ಮ ಪಾಲಿಗೆ ಸುಪ್ರೀಂ ಅಥಾರಿಟಿ,” ಎಂದು ತಿಳಿಸಿದರು. ನಾಯಕತ್ವದ ಬಗ್ಗೆ ಇನ್ನು ಮುಂದೆ ಹೆಚ್ಚಿನ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ ಎಂದು ಅವರು ಗೊಂದಲಗಳಿಗೆ ತೆರೆ ಎಳೆದರು.

​ಇದೇ ಸಂದರ್ಭದಲ್ಲಿ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆಯೂ ಪರಮೇಶ್ವರ್ ಪ್ರತಿಕ್ರಿಯೆ ನೀಡಿದರು. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ ಅವರು, ತಮಿಳುನಾಡಿನಲ್ಲಿ ಡಿಎಂಕೆ ಮೈತ್ರಿಕೂಟ ಮುನ್ನಡೆ ಸಾಧಿಸಲಿದೆ ಎಂದರು. ಪಶ್ಚಿಮ ಬಂಗಾಳದ ರಾಜಕೀಯ ಸ್ಥಿತಿಗತಿ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಉಲ್ಲೇಖಿಸಿದ ಅವರು, ಅಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಮ್ಮೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಅಬ್ಸರ್ವರ್‌ಗಳ ವರದಿ ತಿಳಿಸಿರುವುದಾಗಿ ಹೇಳಿದರು. ಅಸ್ಸಾಂನಲ್ಲಿ ಮಾತ್ರ ಬಿಜೆಪಿ ಪರ ಅಲೆ ಇರುವುದನ್ನು ಸಮೀಕ್ಷೆಗಳು ತೋರಿಸುತ್ತಿವೆ ಎಂದು ಅವರು ವಿಶ್ಲೇಷಿಸಿದರು.

Leave a Reply

Your email address will not be published. Required fields are marked *

error: Content is protected !!